ADVERTISEMENT

ಕಸಾಬ್‌ಗೆ ಗಲ್ಲು: ತಾತ್ಕಾಲಿಕ ತಡೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST
ಕಸಾಬ್‌ಗೆ ಗಲ್ಲು: ತಾತ್ಕಾಲಿಕ ತಡೆ
ಕಸಾಬ್‌ಗೆ ಗಲ್ಲು: ತಾತ್ಕಾಲಿಕ ತಡೆ   

ನವದೆಹಲಿ, (ಪಿಟಿಐ): ಮುಂಬೈ ಮೇಲೆ 26/11ರಂದು ನಡೆದ ದಾಳಿ ಪ್ರಕರಣದಲ್ಲಿ ಜೀವಂತವಾಗಿ ಸೆರೆ ಸಿಕ್ಕ ಏಕೈಕ ಉಗ್ರ ಹಾಗೂ ಪಾಕಿಸ್ತಾನದ ಪ್ರಜೆ ಅಜ್ಮಲ್ ಕಸಾಬ್‌ಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್ ಸೋಮವಾರ ತಾತ್ಕಾಲಿಕವಾಗಿ ತಡೆ ಹಿಡಿದಿದೆ.

ಕಸಾಬ್ ತನಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇನ್ನೂ ಬಾಕಿ ಇದ್ದು, ಕಾನೂನಾತ್ಮಕವಾಗಿ ಆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ. ಹೀಗಾಗಿ ಅಲ್ಲಿಯವರೆಗೂ ಗಲ್ಲು ಶಿಕ್ಷೆಯನ್ನು ತಡೆ ಹಿಡಿಯಬೇಕು ಎಂದು ಸೋಮವಾರ ನ್ಯಾಯಾಲಯ ಆದೇಶಿಸಿದೆ.

ನ್ಯಾಯಮೂರ್ತಿಗಳಾದ ಅಫ್ತಾಬ್ ಅಲಂ ಮತ್ತು ಸಿ.ಕೆ.ಪ್ರಸಾದ್ ಅವರನ್ನು ಒಳಗೊಂಡ ವಿಶೇಷ ಪೀಠ ಈ ಆದೇಶ ನೀಡಿದೆ.  ತ್ವರಿತವಾಗಿ ಪ್ರಕಣದ ವಿಚಾರಣೆ ಮುಗಿಸಲು ಆರೋಪಿ ಸಲ್ಲಿಸಿರುವ ವಿಶೇಷ ರಜಾ ಕಾಲದ ಅರ್ಜಿಯಲ್ಲಿ ಅಗತ್ಯ ಬದಲಾವಣೆ ಮತ್ತು ಗಲ್ಲು ಶಿಕ್ಷೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಪೂರಕವಾದ ದಾಖಲೆ ಒದಗಿಸಲು ನ್ಯಾಯಮೂರ್ತಿಗಳು ಅವಕಾಶ ನೀಡಿದರು. ಕಸಾಬ್ ಅರ್ಜಿಯನ್ನು ನ್ಯಾಯಾಲಯ ಕೂಲಂಕಷವಾಗಿ ವಿಚಾರಣೆ ನಡೆಸಲು ಬಯಸುತ್ತದೆ. ಈ ದೇಶದಲ್ಲಿ ಕಾನೂನು ಎಲ್ಲದಕ್ಕಿಂತ ಸರ್ವಶ್ರೇಷ್ಠವಾದ ಕಾರಣ ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಳಿಸುವುದು ಅಗತ್ಯ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.

ADVERTISEMENT

ಈ ಅಭಿಪ್ರಾಯವನ್ನು ಮಹಾರಾಷ್ಟ್ರ ಸರ್ಕಾರದ ಪರ ವಕೀಲ ಮತ್ತು ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯಂ ಅವರು ಒಪ್ಪಿಕೊಂಡರು. ಪ್ರಕರಣ ಭಯೋತ್ಪಾದಕ ದಾಳಿಯಂತಹ ಗಂಭೀರವಾದ ವಿಷಯಕ್ಕೆ ಸಂಬಂಧಿಸಿದೆ, ಹೀಗಾಗಿ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಆದಷ್ಟು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಅವರು ಮನವಿ ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮತ್ತು ವಿಶೇಷ ನ್ಯಾಯಾಲಯಗಳ ಅಗತ್ಯ ದಾಖಲೆ ಹಾಗೂ ಭಾಷಾಂತರ ಪ್ರತಿಗಳನ್ನು ಅವರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿದರು. ಮನವಿಗೆ ಸ್ಪಂದಿಸಿದ ನ್ಯಾಯಮೂರ್ತಿಗಳು ವಿಚಾರಣೆಯನ್ನು ಆದಷ್ಟೂ ಶೀಘ್ರ ಗತಿಯಲ್ಲಿ ನಡೆಸುವುದಾಗಿ ತಿಳಿಸಿದರು. ಮುಂಬೈನ ಆರ್ಥರ್ ರಸ್ತೆಯ ಕಾರಾಗೃಹದಲ್ಲಿರುವ ಕಸಾಬ್ ಅಲ್ಲಿಂದಲೇ ಅಧಿಕಾರಿಗಳ ಮೂಲಕ ವಿಶೇಷ ರಜಾ ಕಾಲದ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾನೆ. ತನಗೆ ವಿಧಿಸಲಾಗಿರುವ ಗಲ್ಲು ಶಿಕ್ಷೆಯನ್ನು ಪ್ರಶ್ನಿಸಿದ್ದಾನೆ.

ಆರೋಪಿಯ ಅರ್ಜಿ ಕುರಿತು ನಿರ್ಧಾರ ತೆಗೆದುಕೊಳ್ಳಲು ಸುಪ್ರೀಂಕೋರ್ಟ್ ಹಿರಿಯ ವಕೀಲ ರಾಜು ರಾಮಚಂದ್ರನ್ ಅವರನ್ನು ನ್ಯಾಯಾಲಯದ ಸಲಹೆಗಾರರನ್ನಾಗಿ ನೇಮಕ ಮಾಡಿದೆ. ಈ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲಹೆ ನೀಡಲು ಒಪ್ಪಿಕೊಂಡ ರಾಜು ಅವರನ್ನು ನ್ಯಾಯಾಧೀಶರು ಶ್ಲಾಘಿಸಿದರು. ದೇಶದ ಬಹುತೇಕ ಜನರು ಈ ಅರ್ಜಿಯ ವಿಚಾರಣೆ ನಡೆಸದೆ ನೇರವಾಗಿ ತಿರಸ್ಕರಿಸಬೇಕು ಎಂದು ಬಯಸಿದ್ದರು.

ಇಂತಹ ಸಂದರ್ಭದಲ್ಲಿ ನ್ಯಾಯಾಲಯದ ಸಲಹೆಗಾರರಾಗಲು ರಾಜು ಅವರು ಒಪ್ಪಿಕೊಂಡಿರುವುದು ಸಂತಸ ತಂದಿದೆ ಎಂದರು. ಭಯೋತ್ಪಾದಕ ಕೃತ್ಯಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯ ಕಳೆದ ವರ್ಷ ಮೇ 6ರಂದು ಕಸಾಬ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಈ ಆದೇಶವನ್ನು ಮುಂಬೈ ಹೈಕೋರ್ಟ್ ಎತ್ತಿ ಹಿಡಿದಿತ್ತು.

ರೋಬೋಟ್‌ನಂತೆ ನನ್ನ ತಲೆ ಕೆಡಿಸಲಾಯಿತು...
ನವದೆಹಲಿ (ಪಿಟಿಐ):
`ದೇವರ ಹೆಸರಿನಲ್ಲಿ ಹೀನ ಕೃತ್ಯ ಎಸಗುವಂತೆ ನನ್ನ ತಲೆಯಲ್ಲಿ ತುಂಬಲಾಗಿತ್ತು. ಹಾಗಾಗಿ 2008ರ ಮುಂಬೈ ದಾಳಿಯಲ್ಲಿ ನಾನು ರೋಬೋಟ್ ರೀತಿ ಕೆಲಸ ಮಾಡಿದೆ. ನಾನಿನ್ನೂ ಯುವಕ. ನನಗೆ ಮರಣ ದಂಡನೆ ವಿಧಿಸಿರುವುದು ಉಚಿತವಲ್ಲ~ ಎಂದು ಅಜ್ಮಲ್ ಕಸಾಬ್ ತನ್ನ ವಕೀಲರ ಮೂಲಕ ಸೋಮವಾರ ಸುಪ್ರೀಂಕೋರ್ಟ್ ಎದುರು ಅಲವತ್ತುಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.