ADVERTISEMENT

ಕಾಂಗ್ರೆಸ್‌ಗೆ ಭಾರಿ ಮುಖಭಂಗ

ಬಹಿಷ್ಕಾರದ ಕರೆಗೆ ಕಿವಿಗೊಡದ ವಿರೋಧ ಪಕ್ಷಗಳು

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 19:30 IST
Last Updated 1 ಜುಲೈ 2017, 19:30 IST
ಕಾಂಗ್ರೆಸ್‌ಗೆ ಭಾರಿ ಮುಖಭಂಗ
ಕಾಂಗ್ರೆಸ್‌ಗೆ ಭಾರಿ ಮುಖಭಂಗ   

ನವದೆಹಲಿ: ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಶುಕ್ರವಾರ ಮಧ್ಯರಾತ್ರಿ ನಡೆದ ಜಿಎಸ್‌ಟಿ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸುವಂತೆ ಕಾಂಗ್ರೆಸ್ ನೀಡಿದ್ದ ಕರೆಗೆ ಇತರ ವಿರೋಧ ಪಕ್ಷಗಳು ಕಿವಿಗೊಡಲಿಲ್ಲ.

ಕಾಂಗ್ರೆಸ್ ಕರೆಯನ್ನು ಧಿಕ್ಕರಿಸಿ ಎನ್‌ಸಿಪಿ, ಎಸ್‌ಪಿ, ಬಿಎಸ್‌ಪಿ, ಜೆಡಿಎಸ್ ಮತ್ತು ಕೇರಳ ಕಾಂಗ್ರೆಸ್ (ಮಣಿ)  ಸಮಾರಂಭದಲ್ಲಿ ಭಾಗವಹಿಸಿದ್ದವು. ಇದರಿಂದ ಪಕ್ಷಕ್ಕೆ ಮುಖಭಂಗವಾಗಿದೆ.

ಎಲ್ಲದರಲ್ಲೂ ತಾನೇ ಮೇಲುಗೈ ಸಾಧಿಸಬೇಕು ಎಂಬ ಕಾಂಗ್ರೆಸ್‌ನ ನಿಲುವು, ಹಲವು ಬಾರಿ ಇತರ ವಿರೋಧ ಪಕ್ಷಗಳು ಅದರಿಂದ ದೂರವಾಗಲು ಕಾರಣ ಎಂದು ಹೇಳಲಾಗುತ್ತಿದೆ. ಜಿಎಸ್‌ಟಿ ಉದ್ಘಾಟನಾ ಸಮಾರಂಭ ಇದಕ್ಕೆ ತಾಜಾ ಉದಾಹರಣೆ.

ADVERTISEMENT

ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಜೆಡಿಯು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ದೂರವಾಗಿದೆ. ಈಗ  ಜಿಎಸ್‌ಟಿ ವಿಚಾರದಲ್ಲಿ ಇತರ ಪಕ್ಷಗಳು ಕೂಡ ಅದರ ನಿರ್ಧಾರಕ್ಕೆ ವಿರುದ್ಧವಾಗಿ ನಡೆದುಕೊಂಡಿವೆ.

‘ಮೊದಲನೆಯದಾಗಿ ಸಮಾರಂಭದಲ್ಲಿ ಭಾಗವಹಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲು ಕಾಂಗ್ರೆಸ್ ವಿಳಂಬ ಮಾಡಿತು. ನಂತರ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ನಂತರ ಇತರ ಪಕ್ಷಗಳಿಗೆ ಸಮಾರಂಭ ಬಹಿಷ್ಕರಿಸುವಂತೆ ಆಗ್ರಹಿಸಿತು’ ವಿರೋಧ ಪಕ್ಷಗಳು ಹೇಳಿವೆ.

ಆ ಮೂಲಕ, ಕುರುಡಾಗಿ ಕಾಂಗ್ರೆಸ್‌ ಅನ್ನು ಬೆಂಬಲಿಸುವುದಿಲ್ಲ ಎಂಬ ಸಂದೇಶವನ್ನು ಅವುಗಳು ರವಾನಿಸಿವೆ. ಜಿಎಸ್‌ಟಿ ಉದ್ಘಾಟನಾ ಸಮಾರಂಭಕ್ಕೆ ಮಾಜಿ ಪ್ರಧಾನಿಗಳಾದ ಎಚ್‌.ಡಿ.ದೇವೇಗೌಡ ಮತ್ತು ಮನಮೋಹನ್ ಸಿಂಗ್ ಅವರನ್ನು ಆಹ್ವಾನಿಸಲಾಗಿತ್ತು.  ಕಾಂಗ್ರೆಸ್‌ ಮುಖಂಡರು, ದೇವೇಗೌಡ ಅವರಿಗೆ ದೂರವಾಣಿ ಕರೆ ಮಾಡಿ ಸಮಾರಂಭ ಬಹಿಷ್ಕರಿಸುವಂತೆ ಮನವೊಲಿಸಲು ಮಾಡಿದ ಪ್ರಯತ್ನ ಫಲಕಾರಿ ಆಗಲಿಲ್ಲ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸಹ ಕಾಂಗ್ರೆಸ್ ಮುಖಂಡರ ಮಾತಿಗೆ ಕಿವಿಗೊಡಲಿಲ್ಲ.

ಜಿಎಸ್‌ಟಿ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿರುವಾಗ ಈಗ ಅಪಸ್ವರ ಏಕೆ ಎಂದು ಪವಾರ್ ಅವರ ಆಪ್ತ ಮತ್ತು ಎನ್‌ಸಿಪಿ ಸಂಸದ ಪ್ರಫುಲ್ಲ ಪಟೇಲ್ ಪ್ರಶ್ನಿಸಿರುವುದು ಕಾಂಗ್ರೆಸ್‌ಗೆ ಮುಜುಗರ ಉಂಟು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.