ADVERTISEMENT

ಕಾಂಗ್ರೆಸ್‌ಗೆ ತಲೆನೋವಾದ ಮುಖ್ಯಮಂತ್ರಿಗಳು

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2012, 19:30 IST
Last Updated 15 ಏಪ್ರಿಲ್ 2012, 19:30 IST

ನವದೆಹಲಿ (ಪಿಟಿಐ): ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಕಾಂಗ್ರೆಸ್ ಪಕ್ಷವು, ಇದೀಗ ಕೆಲವು ರಾಜ್ಯಗಳಲ್ಲಿ ಪಕ್ಷದ ಮುಖ್ಯಮಂತ್ರಿಗಳಿಂದಲೇ ಸಮಸ್ಯೆ ಎದುರಿಸುವಂತೆ ಆಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಈಗಾಗಲೇ ಎಚ್ಚರಿಕೆಯ ಕರೆ ಬಂದಿದೆ.

ಇನ್ನು ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮುಂದುವರಿಸುವುದರ ವಿರುದ್ಧ ಬಂಡಾಯ ಎದ್ದಿರುವ ವ್ಯಕ್ತಿಗಳು ದೆಹಲಿಗೆ ಎಡತಾಕುತ್ತಿದ್ದಾರೆ. ಎರಡನೇ ಅವಧಿಯಲ್ಲಿ ಈಗಾಗಲೇ ಮೂರು ವರ್ಷಗಳನ್ನು ಪೂರೈಸಿರುವ ಗೆಹ್ಲೋಟ್, ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಿಸಲಿದ್ದಾರೆ. ಈ ಬಾರಿ ಅವರು ಪಕ್ಷೇತರ ಅಭ್ಯರ್ಥಿಗಳನ್ನೇ ನೆಚ್ಚಿಕೊಳ್ಳಬೇಕಾಗಿದೆ.

ಕೇಂದ್ರ ಸಚಿವ ಹರೀಶ್ ರಾವತ್ ಅವರು ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿರುವುದರಿಂದ ಉತ್ತರಾಖಂಡದ ಮುಖ್ಯಮಂತ್ರಿಯಾಗಿ ಗಟ್ಟಿಯಾಗಿ ನೆಲೆಯೂರಲು ವಿಜಯ್ ಬಹುಗುಣ ಸೋತಿದ್ದಾರೆ. ಕೇರಳದಲ್ಲಿ ಕೂಡ ಪರಿಸ್ಥಿತಿ ಉತ್ತಮವಾಗಿಲ್ಲ. ಮುಖ್ಯಮಂತ್ರಿ ಉಮ್ಮನ್ ಚಾಂಡಿ ತಮ್ಮ 11 ತಿಂಗಳ ಸಚಿವ ಸಂಪುಟವನ್ನು ವಿಸ್ತರಿಸುವ ಮೂಲಕ ಮುಸ್ಲಿಂ ಲೀಗ್ ಸದಸ್ಯರನ್ನು ಸೇರಿಸಿಕೊಂಡಿರುವುದು ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷದ ವಕ್ತಾರರು ಮಾತ್ರ ಈ ಎಲ್ಲ ವಾಸ್ತವಾಂಶಗಳನ್ನು ಒಪ್ಪುತ್ತಿಲ್ಲ. ಪಕ್ಷಕ್ಕೆ ಕೆಲವು ಮುಖ್ಯಮಂತ್ರಿಗಳು ತಲೆನೋವಾಗಿದ್ದಾರೆ ಎನ್ನುವ ಆರೋಪವನ್ನು ಅವರು ಅಲ್ಲಗಳೆಯುತ್ತಾರೆ.

ಒಂದು ವೇಳೆ ಅಂಥದ್ದೇನಾದರೂ ಗಂಭೀರ ಸಮಸ್ಯೆ ಇದ್ದರೆ, ಪಕ್ಷವು ಹಲವು ರಾಜ್ಯಗಳಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತಲೇ ಇರಲಿಲ್ಲ ಎನ್ನುತ್ತಾರೆ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ. ಇನ್ನು ರಾಜಧಾನಿ ದೆಹಲಿಯನ್ನು ತೆಗೆದುಕೊಂಡರೆ ಕಳೆದ 14 ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಶೀಲಾ ದೀಕ್ಷಿತ್ ಅವರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಗ್ನರಾಗಿದ್ದಾರೆ.

ತ್ವರಿತ ಗತಿಯಿಂದ ಕೆಲಸ ಮಾಡಿ, ಇಲ್ಲದಿದ್ದರೆ ಅನಿವಾರ್ಯವಾಗಿ ಬದಲಿ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಚವಾಣ್ ಅವರಿಗೆ ಹೈಕಮಾಂಡ್‌ನಿಂದ ಬಿಸಿ ಮುಟ್ಟಿಸಲಾಗಿದೆ.

`ಮುಖ್ಯಮಂತ್ರಿ ಹುದ್ದೆ ಎಂದರೆ ಪ್ರಧಾನಿ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದಂತೆ ಅಲ್ಲ. ನಿರ್ಧಾರ ತೆಗೆದುಕೊಳ್ಳದ ಹೊರತು ರಾಜ್ಯಗಳಲ್ಲಿ ತಾನೇ ತಾನಾಗಿ ಯಾವ ಕೆಲಸವೂ ಆಗುವುದಿಲ್ಲ~ ಎಂದು ಹೆಸರು ಹೇಳಲು ಇಚ್ಛಿಸದ ಪಕ್ಷದ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಚವಾಣ್ 2010ರ ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗುವುದಕ್ಕೆ ಮುನ್ನ ಪ್ರಧಾನಿ ಕಚೇರಿ ರಾಜ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ಮೇಲಿನ ಹೇಳಿಕೆಯು ಮಹತ್ವದ್ದಾಗಿದೆ.

ಆಂಧ್ರ ಪ್ರದೇಶದ ವಿಷಯದಲ್ಲಿ ಪಕ್ಷ ಇನ್ನಷ್ಟು ಚಿಂತೆಗೀಡಾಗಿದೆ. ಸ್ವಂತ ಬಲದಿಂದ ಪಕ್ಷವು ಆಡಳಿತಕ್ಕೆ ಬಂದಿರುವ ಏಕೈಕ ಪ್ರಮುಖ ರಾಜ್ಯ ಇದಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರಿಗೆ ನಾಯಕತ್ವ ಗುಣವೇ ಇಲ್ಲ ಎಂಬುದು ಹಲವರ ಆರೋಪ. ರೆಡ್ಡಿ ಹಾಗೂ ಚವಾಣ್ 2014ರಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದಲ್ಲಿ ಲೋಕಸಭೆ- ವಿಧಾನಸಭೆ ಚುನಾವಣೆಯ ನೇತೃತ್ವ ವಹಿಸಲು ಸಾಧ್ಯವಿಲ್ಲ ಎನ್ನುವುದು ಪಕ್ಷದಲ್ಲಿ ಕೆಲವರ ಅನಿಸಿಕೆ.

ಇತರ ರಾಜ್ಯಗಳಿಗೆ ಹೋಲಿಸಿದರೆ, ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ಮಿಜೊರಾಂ ಮತ್ತು ಹರಿಯಾಣದ ಮುಖ್ಯಮಂತ್ರಿಗಳಿಂದ ಪಕ್ಷಕ್ಕೆ ಅಂಥದ್ದೇನೂ ಸಮಸ್ಯೆ ಎದುರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT