ADVERTISEMENT

ಕಾಂಗ್ರೆಸ್‌ ಮುಕ್ತ ಭಾರತ: ಮೋದಿ ಕರೆ

ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಪ್ರಧಾನಿ ಅಭ್ಯರ್ಥಿ ಟೀಕಾ ಪ್ರಹಾರ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2013, 19:30 IST
Last Updated 22 ಡಿಸೆಂಬರ್ 2013, 19:30 IST

ಮುಂಬೈ (ಪಿಟಿಐ): ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದಲ್ಲಿ ಮುಳುಗಿರುವವರೇ ಭ್ರಷ್ಟಾಚಾರದ ವಿರುದ್ಧ ಉಪದೇಶ ನೀಡು­ತ್ತಿದ್ದಾರೆ ಎಂದು ವ್ಯಂಗ್ಯ­ವಾಡಿದ್ದಾರೆ. ಕಾಂಗ್ರೆಸ್‌ ಮುಕ್ತ ಭಾರತ ನಿರ್ಮಾಣ­ವಾಗಬೇಕು ಎಂದೂ ಅವರು ಕರೆ ನೀಡಿದ್ದಾರೆ.

‘ಕಾಂಗ್ರೆಸ್‌ನ ದೊಡ್ಡ ನಾಯಕರೊ­ಬ್ಬರ ಭಾಷಣವನ್ನು ನಾನು  ಕೇಳಿಸಿ­ಕೊಂಡೆ. ಅವರು ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿದ್ದರು. ಇಂತಹ ಧೈರ್ಯ ಅವರಿಗೆ ಮಾತ್ರ ಇದೆ. ಈ ಜನರು ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿ­ದ್ದಾರೆ. ಮುಗ್ಧ ಮುಖ­ಭಾವದಿಂದ ಭ್ರಷ್ಟಾಚಾರದ ವಿರುದ್ಧ ಮಾತನಾಡು ತ್ತಿದ್ದಾರೆ’ ಎಂದು ಮೋದಿ ಟೀಕಿಸಿದರು. ಮುಂಬೈನ ಬಿಕೆಸಿ ಮೈದಾನ­ದಲ್ಲಿ ನಡೆದ ಬೃಹತ್‌ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿ­ದ್ದರು.

ಆದರ್ಶ್ ಆಯೋಗದ ವರದಿ ಹಲ­ವರ ಮೇಲೆ ದೋಷಾರೋಪ ಮಾಡಿದೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರ ಭ್ರಷ್ಟರನ್ನು ಸಂರಕ್ಷಿಸುತ್ತಿದೆ. ಇನ್ನೊಂದೆಡೆ ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಬೋಧನೆ ಮಾಡುತ್ತಿದ್ದಾರೆ ಎಂದು ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸದೆ ಮೋದಿ ಟೀಕಿಸಿದರು. ದೇಶ ಎದುರಿಸುತ್ತಿರುವ ಸಮಸ್ಯೆಗಳಿಗೆ ಇತಿಹಾಸವಾಗಲಿ, ಭೌಗೋಳಿಕತೆಯಾ­ಗಲಿ ಕಾರಣವಲ್ಲ. ಬದಲಿಗೆ ಕಾಂಗ್ರೆಸ್‌ ಆಡಳಿತದ ಸರ್ಕಾರಗಳು ಕಾರಣ. ಹಾಗಾಗಿ ‘ಕಾಂಗ್ರೆಸ್‌ ಮುಕ್ತ ಭಾರತ’ದ ಧ್ವನಿ ಮುಂಬೈಯಿಂದ ಮೊಳಗಲಿ ಎಂದು ಮೋದಿ ಹೇಳಿದರು.

‘2014ರ ಚುನಾವಣೆಯಲ್ಲಿ ಪಕ್ಷದ ಹೆಸರಿನಿಂದಲ್ಲ, ದೇಶದ ಹೆಸರಿನಲ್ಲಿ ಮತ ಕೇಳಬೇಕು. ‘ಭಾರತಕ್ಕೆ ಮತ ಹಾಕಿ’ ಎಂದು ಹೇಳಲು ನಾವು ಬಯಸುತ್ತೇವೆ. ವಂಶ ಪಾರಂಪರ್ಯ ಆಡಳಿತ, ಭ್ರಷ್ಟಾ­ಚಾರ, ಹಣದುಬ್ಬರ, ದುರಾಡಳಿತಗ­ಳಿಂದ ದೇಶವನ್ನು ಬಿಡುಗಡೆ ಮಾಡಲು ಇದು ಅಗತ್ಯ’ ಎಂದರು.

ಅಮೆರಿಕ ದೂತಾವಾಸಕ್ಕೆ ಆಹ್ವಾನ ವಾಪಸ್‌
ಮುಂಬೈ (ಐಎಎನ್‌ಎಸ್‌):
ಭಾರತ–ಅಮೆರಿಕ ನಡುವಣ ಸಂಬಂಧದಲ್ಲಿ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಮುಂಬೈ ಸಮಾವೇಶಕ್ಕೆ ಅಮೆರಿಕ ದೂತಾವಾಸ ಅಧಿಕಾರಿಗಳಿಗೆ ನೀಡಿದ್ದ ಆಹ್ವಾನವನ್ನು ಹಿಂದಕ್ಕೆ ಪಡೆಯಲಾಗಿದೆ. ‘ಮಹಾ ಘರ್ಜನ ಸಮಾವೇಶ’ಕ್ಕೆ 10 ಸಾವಿರ ಚಹಾ ಮಾರಾಟಗಾರರ ಜತೆ ಮುಂಬೈನಲ್ಲಿರುವ ಸುಮಾರು 140 ದೂತಾವಾಸ ಮತ್ತು ಇತರ ರಾಜತಾಂತ್ರಿಕ ಕಚೇರಿಗಳಿಗೆ ಬಿಜೆಪಿ ಆಹ್ವಾನ ನೀಡಿತ್ತು.

ಅಮೆರಿಕದಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಾಗಡೆ ಅವರನ್ನು ಹೀನಾಯವಾಗಿ ನಡೆಸಿಕೊಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಆದುದರಿಂದ ಅಮೆರಿಕ ದೂತಾವಾಸ ಅಧಿಕಾರಿ­ಗಳಿಗೆ ನೀಡಿದ್ದ ಆಹ್ವಾನವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು  ಬಿಜೆಪಿ ನಾಯಕ ರಾಜೀವ್‌ ಪ್ರತಾಪ್‌ ರೂಡಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT