ADVERTISEMENT

ಕಾಂಗ್ರೆಸ್‌ ಸಚಿವರ ಪಟ್ಟಿ: ಇಂದು ಅಂತಿಮ

ಸಚಿವ ಸ್ಥಾನ ಆಕಾಂಕ್ಷಿಗಳು ಬೆಂಬಲಿಗರೊಂದಿಗೆ ದೆಹಲಿಗೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:53 IST
Last Updated 4 ಜೂನ್ 2018, 19:53 IST
ಕಾಂಗ್ರೆಸ್‌ ಸಚಿವರ ಪಟ್ಟಿ: ಇಂದು ಅಂತಿಮ
ಕಾಂಗ್ರೆಸ್‌ ಸಚಿವರ ಪಟ್ಟಿ: ಇಂದು ಅಂತಿಮ   

ನವದೆಹಲಿ: ವಿದೇಶ ಪ್ರವಾಸಕ್ಕೆ ತೆರಳಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಂಗಳವಾರ ಬೆಳಗಿನಜಾವ ನವದೆಹಲಿಗೆ ವಾಪಸ್ಸಾಗಲಿದ್ದು, ಕಾಂಗ್ರೆಸ್‌ ಸಚಿವರ ಪಟ್ಟಿಗೆ ಸಂಜೆಯ ವೇಳೆಗೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ರಾಜಧಾನಿಗೆ ಬರಲಿರುವ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಹುಲ್‌ ಜೊತೆ ಸಂಜೆ ಸಭೆ ನಡೆಸಿ ಚರ್ಚಿಸಿದ ಬಳಿಕ ಪಕ್ಷದಿಂದ ಸಚಿವರಾಗಲಿರುವವರ ಪಟ್ಟಿ ಅಂತಿಮಗೊಳ್ಳಲಿದೆ.

ಸಚಿವ ಸಂಪುಟದ ಸದಸ್ಯರ ಪ್ರಮಾಣ ವಚನ ಸಮಾರಂಭ ಬುಧವಾರ ಮಧ್ಯಾಹ್ನ ನಿಗದಿಯಾಗಿದೆ. ಕಾಂಗ್ರೆಸ್‌ನಿಂದ ಸಚಿವರಾಗಲು ಬಯಸಿರುವ ಆಕಾಂಕ್ಷಿಗಳು ಸೋಮವಾರವೇ ತಮ್ಮ ಬೆಂಬಲಿಗ ಮುಖಂಡರೊಂದಿಗೆ ರಾಷ್ಟ್ರ ರಾಜಧಾನಿಗೆ ದೌಡಾಯಿಸಿದ್ದು, ವರಿಷ್ಠರ ಗಮನ ಸೆಳೆಯುವ ಪ್ರಯತ್ನ ಮುಂದುವರಿಸಿದ್ದಾರೆ.

ADVERTISEMENT

ಕಾಂಗ್ರೆಸ್‌ಗೆ ಹಂಚಿಕೆ ಆಗಿರುವ 22 ಸಚಿವ ಸ್ಥಾನಗಳಲ್ಲಿ ಈಗಾಗಲೇ ಪರಮೇಶ್ವರ್‌ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ಮಿಕ್ಕ 21 ಸ್ಥಾನಗಳಲ್ಲಿ ಈಗ 17 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆ ಇದೆ. ಪಕ್ಷದಲ್ಲಿನ ಪ್ರಭಾವ, ಜಾತಿ ಮತ್ತು ಪ್ರಾದೇಶಿಕ ಲೆಕ್ಕಾಚಾರದೊಂದಿಗೆ ಸಚಿವರನ್ನು ಆಯ್ಕೆ ಮಾಡಲಿರುವ ಪಕ್ಷದ ವರಿಷ್ಠರು ಕೆಲವೇ ಕೆಲವು ಹಿರಿಯರಿಗೆ ಹಾಗೂ ಹೊಸ ಮುಖಗಳಿಗೆ ಆದ್ಯತೆ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್‌ ಗುಂಡೂರಾವ್, ಲೋಕಸಭೆಯ ಕಾಂಗ್ರೆಸ್‌ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್ ಮಂಗಳವಾರ ರಾಹುಲ್ ಗಾಂಧಿ ಆಯೋಜಿಸಲಿರುವ ಸಭೆಯಲ್ಲಿ ಭಾಗವಹಿಸಿ, ಸಚಿವರ ಆಯ್ಕೆ ಕುರಿತು ಚರ್ಚಿಸಲಿದ್ದಾರೆ.

ಹಿರಿಯ ಮುಖಂಡರೂ ಸೇರಿದಂತೆ ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವ ಅಂದಾಜು 30ಕ್ಕೂ ಅಧಿಕ ಶಾಸಕರು ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದು, ಮಾಜಿ ಸಚಿವರಾದ ರೋಷನ್ ಬೇಗ್, ಆರ್‌.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ, ಈಶ್ವರ ಖಂಡ್ರೆ, ಅಮರೇಗೌಡ ಬಯ್ಯಾಪುರ, ಪಿ.ಟಿ. ಪರಮೇಶ್ವರ ನಾಯ್ಕ, ಶಾಸಕರಾದ ಈ.ತುಕಾರಾಮ್‌, ಭೀಮಾ ನಾಯ್ಕ, ರಾಘವೇಂದ್ರ ಹಿಟ್ನಾಳ್, ಗಣೇಶ್ ಹುಕ್ಕೇರಿ, ರಾಜಶೇಖರ ಪಾಟೀಲ್ ಹುಮ್ನಾಬಾದ್, ಶ್ರೀನಿವಾಸ್ ಮಾನೆ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದಾರೆ.

8 ಸಚಿವ ಸ್ಥಾನ ಭರ್ತಿಗೆ ಜೆಡಿಎಸ್ ನಿರ್ಧಾರ

ಬೆಂಗಳೂರು: ಸಂಪುಟ ವಿಸ್ತರಣೆಯ ಬಳಿಕ ಅತೃಪ್ತರಿಂದ ಎದುರಾಗಬಹುದಾದ ಸಮಸ್ಯೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ 8 ಸ್ಥಾನಗಳನ್ನು ಭರ್ತಿ ಮಾಡಲು ಜೆಡಿಎಸ್‌ ವರಿಷ್ಠರು ನಿರ್ಧರಿಸಿದ್ದಾರೆ.

ಸೋಮವಾರ ರಾತ್ರಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಎಲ್ಲ ಶಾಸಕರ ಅಭಿಪ್ರಾಯವನ್ನು ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.