ADVERTISEMENT

ಕಾಡುಸಿದ್ದೇಶ್ವರ ಮಠದ ಭಕ್ತ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 19:30 IST
Last Updated 14 ಆಗಸ್ಟ್ 2012, 19:30 IST

ಬೆಂಗಳೂರು:. ವಿಲಾಸರಾವ್ ಅವರಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧ. ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಹಾಗೂ ಅದಕ್ಕೂ ಮೊದಲು ಅವರು ರಾಜ್ಯಕ್ಕೆ ಮೇಲಿಂದ ಮೇಲೆ ಭೇಟಿ ನೀಡಿ, ರಾಜಕಾರಣದಲ್ಲಿ ಉತ್ತಮ ಭವಿಷ್ಯಕ್ಕಾಗಿ ಜ್ಯೋತಿಷಿಗಳ ಮೊರೆ ಹೋದ ಹಲವು ನಿದರ್ಶನಗಳಿವೆ.

`ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಕಾಡುಸಿದ್ದೇಶ್ವರ ಮಠದ ಹಿರಿಯ ಸ್ವಾಮೀಜಿಯ ಪರಮ ಭಕ್ತರಾಗಿದ್ದರು. ರಾಜಕೀಯ ಸೇರಿದಂತೆ ಯಾವುದೇ ರೀತಿಯ ಸಂಕಷ್ಟ ಎದುರಾದರೂ ಒಮ್ಮೆ ಕಾಡುಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜನನ್ನು (ಸ್ವಾಮೀಜಿ) ನೆನೆದರೆ ಅವರಿಗೆ ಇಷ್ಟಾರ್ಥ ಸಿದ್ಧಿಯಾಗುತ್ತಿತ್ತು. ಹೀಗಾಗಿ ಕುಟುಂಬ ಸಮೇತ ಅನೇಕ ಸಲ ಅಲ್ಲಿಗೆ ಭೇಟಿ ನೀಡಿದ್ದಾರೆ~ ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್.

ತೀವ್ರ ಅಸ್ವಸ್ಥರಾದ ಕಾರಣಕ್ಕೆ ದೇಶಮುಖ್ ಅವರ ಪತ್ನಿ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿ ಜತೆ ಸೋಮವಾರ ಸಂಜೆ ದೂರವಾಣಿ ಮೂಲಕ ಮಾತನಾಡಿ ಆಶೀರ್ವಾದ ಪಡೆದಿದ್ದರು ಎಂಬುದನ್ನೂ ಅವರು ಹೇಳಿದರು.

`ದೇಶಮುಖ್ ಅವರಿಗೆ ಕಾಡುಸಿದ್ದೇಶ್ವರ ಮಠದ ಪರಿಚಯ ಆಗಿದ್ದು ಕೂಡ ನನ್ನಿಂದಲೇ. ಒಮ್ಮೆ ಅವರಿಗೆ ಮಠದ ಬಗ್ಗೆ ವಿವರಿಸಿದ್ದೆ. ಕುತೂಹಲದಿಂದ ಬಂದರು. ಒಂದು ರೀತಿಯ ನೆಮ್ಮದಿ ಪಡೆದರು. ಬಳಿಕ ಮಠದ ಭಕ್ತರಾದರು~ ಎಂದು ನೆನಪುಗಳನ್ನು ಬಿಚ್ಚಿಟ್ಟರು.

`ಧರ್ಮಸ್ಥಳದ ಮಂಜುನಾಥ, ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ... ಹೀಗೆ ರಾಜ್ಯದ ಅನೇಕ ದೇವಸ್ಥಾನಗಳ ಭಕ್ತರಾಗಿದ್ದರು. ಕರ್ನಾಟಕಕ್ಕೆ ಬಂದರೆ ನಾನೇ ಅವರಿಗೆ ಗನ್‌ಮ್ಯಾನ್, ಆಪ್ತ ಸಹಾಯಕ... ಎಲ್ಲವೂ ಆಗಿರುತ್ತಿದ್ದೆ. ಹಲವು ಜ್ಯೋತಿಷಿಗಳ ಜತೆಗೂ ಅವರಿಗೆ ನಂಟಿತ್ತು~ ಎನ್ನುತ್ತಾರೆ ಅವರು.

ದೇಶಮುಖ್ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವಿಶ್ವಾಸ ಎದುರಿಸುವ ಸನ್ನಿವೇಶ ಒದಗಿತ್ತು. ಸರ್ಕಾರದ ಪತನ ತಪ್ಪಿಸಲು ತಮ್ಮ ಬೆಂಬಲಿಗ 106 ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸಿದ್ದರು. ಅವರಿಗೆ 11 ದಿನಗಳ ಕಾಲ ರೆಸಾರ್ಟ್‌ನಲ್ಲಿ ಉಳಿಯುವ ವ್ಯವಸ್ಥೆ ಮಾಡಿದ್ದ ಶಿವಕುಮಾರ್ ಅವರು ಬಳಿಕ ವಿಶೇಷ ವಿಮಾನದಲ್ಲಿ ಮುಂಬೈಗೆ ಕರೆದೊಯ್ದು ಬಿಟ್ಟಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.