ADVERTISEMENT

ಕಾರ್ತಿಗೆ ಸಿಬಿಐನಿಂದ 50 ಪ್ರಶ್ನೆಗಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:30 IST
Last Updated 2 ಮಾರ್ಚ್ 2018, 19:30 IST
ಕಾರ್ತಿಗೆ ಸಿಬಿಐನಿಂದ 50 ಪ್ರಶ್ನೆಗಳು
ಕಾರ್ತಿಗೆ ಸಿಬಿಐನಿಂದ 50 ಪ್ರಶ್ನೆಗಳು   

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ, ಐಎನ್‌ಎಕ್ಸ್‌ ಮೀಡಿಯಾ ಸಂಸ್ಥೆಗೆ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೊಡಿಸಲು ಲಂಚ ಪಡೆದ ಆರೋಪದಲ್ಲಿ ಬಂಧನಕ್ಕೆ ಒಳಗಾದ ಕಾರ್ತಿ ಅವರನ್ನು ಸಿಬಿಐ ಶುಕ್ರವಾರ ತೀವ್ರ ವಿಚಾರಣೆಗೆ ಒಳಪಡಿಸಿದೆ.

ಐಎನ್‌ಎಕ್ಸ್‌ ಮೀಡಿಯಾದ ವಿದೇಶಿ ನೇರ ಹೂಡಿಕೆ ಅನುಮತಿಗೆ ಸಂಬಂಧಿಸಿ ಕಾರ್ತಿ ಅವರಿಗೆ ಕನಿಷ್ಠ 50 ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಸರ್ಕಾರಿ ದಾಖಲೆಗಳ ಬಗ್ಗೆ ಕಾರ್ತಿ ಅವರನ್ನು ಪ್ರಶ್ನಿಸಲಾಗಿದೆ ಎಂದು ತಿಳಿದು ಬಂದಿದೆ. ಈ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಸಂಜೆಯ ವರೆಗೆ ಎರಡು ಸುತ್ತು ಮತ್ತು ಸಂಜೆಯ ನಂತರ ಒಂದು ಸುತ್ತು ವಿಚಾರಣೆ ನಡೆಸಲಾಗಿದೆ. ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಐಎನ್‌ಎಕ್ಸ್‌ ಮೀಡಿಯಾಕ್ಕೆ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೊಡುವಲ್ಲಿ ತಮ್ಮ ಪಾತ್ರ ಏನೂ ಇರಲಿಲ್ಲ ಎಂದು ಕಾರ್ತಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಐಎನ್‌ಎಕ್ಸ್ ಮೀಡಿಯಾದ ಪ್ರವರ್ತಕರಾಗಿದ್ದ ಪೀಟರ್‌ ಮುಖರ್ಜಿ ಮತ್ತು ಇಂದ್ರಾಣಿ ಅವರನ್ನು 2008ರಲ್ಲಿ ಭೇಟಿಯಾಗಿಲ್ಲ ಎಂದು ಕಾರ್ತಿ ಖಚಿತವಾಗಿ ಹೇಳಿದ್ದಾರೆ. ಆದರೆ, ಹೋಟೆಲ್‌ ಹಯಾಟ್‌ನಲ್ಲಿ ಕಾರ್ತಿ ಅವರನ್ನು ತಾವು ಮತ್ತು ಪೀಟರ್‌ ಜತೆಯಾಗಿ ಭೇಟಿಯಾಗಿದ್ದೆವು. ಆ ಸಂದರ್ಭದಲ್ಲಿ ಅವರು ವಿದೇಶಿ ನೇರ ಹೂಡಿಕೆಗೆ ಅನುಮತಿ ದೊರಕಿಸಿಕೊಡಲು 10 ಲಕ್ಷ ಡಾಲರ್‌ (ಸುಮಾರು ₹6.5 ಕೋಟಿ) ನೀಡುವಂತೆ ಹೇಳಿದ್ದರು ಎಂದು ಮ್ಯಾಜಿಸ್ಟ್ರೇಟ್‌ ಮುಂದೆ ಇಂದ್ರಾಣಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಿಕೊಳ್ಳುವುದಕ್ಕೆ ಅವಕಾಶ ಇದೆ.

ದಿನಕ್ಕೆ ಎರಡು ಬಾರಿ ತಮ್ಮ ವಕೀಲರನ್ನು ಒಂದು ತಾಸು ಭೇಟಿಯಾಗಲು ಕಾರ್ತಿಗೆ ಅವಕಾಶ ನೀಡಲಾಗಿದೆ. ಆದರೆ ಅವರಿಗೆ ಮನೆ ಆಹಾರ ಪೂರೈಸಲು ನ್ಯಾಯಾಲಯ ಅವಕಾಶ ಕೊಟ್ಟಿಲ್ಲ.

ಬೆಂಗಳೂರಿನ ಕಂಪನಿಗೆ ಕಾರ್ತಿ ನೆರವು?

ಕಾರ್ತಿ ಅವರಿಗೆ ಸೇರಿದ್ದು ಎಂದು ಹೇಳಲಾಗುವ ಕಂಪನಿಯೊಂದು ಪಡೆದುಕೊಂಡ ಹಣದ ಬಗೆಗಿನ ತನಿಖೆಯನ್ನು ಸಿಬಿಐ ತೀವ್ರಗೊಳಿಸಿದೆ. ಬೆಂಗಳೂರಿನ ಕಂಪನಿಯೊಂದು ವಿದೇಶಿ ನೇರ ಹೂಡಿಕೆಗೆ ಅನುಮತಿ ಪಡೆದುಕೊಂಡ ಪ್ರಕರಣವೂ ಅದರಲ್ಲಿ ಸೇರಿದೆ.

ಐಎನ್‌ಎಕ್ಸ್‌ ಮೀಡಿಯಾ ಲಿ. ಮತ್ತು ಅಡ್ವಾನ್ಸ್‌ ಸ್ಟ್ರಾಟೆಜಿಕ್‌ ಕನ್ಸಲ್ಟೆನ್ಸಿ ಪ್ರೈ.ಲಿ.ನಿಂದ (ಎಎಸ್‌ಸಿಪಿಎಲ್‌) ಹಲವು ಇನ್‌ವಾಯ್ಸ್‌ಗಳನ್ನು (ಬಿಲ್‌) ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಇ.ಡಿ.) ವಶಕ್ಕೆ ಪಡೆದಿವೆ. ಎಎಸ್‌ಸಿಪಿಎಲ್‌ ಸಂಸ್ಥೆಯು ಕಾರ್ತಿ ಅವರಿಗೆ ಸೇರಿದ್ದು ಎಂದು ಸಿಬಿಐ ವಾದಿಸುತ್ತಿದೆ.

ಮಾರಿಷಸ್‌ನ ಮೆ. ಕತ್ರ ಹೋಲ್ಡಿಂಗ್‌ ಪ್ರೈ. ಲಿ.ನ ಅಂಗಸಂಸ್ಥೆ ಬೆಂಗಳೂರಿನ ಮೆ. ಮೇಸನ್‌ ಎಂಡ್‌ ಸಮ್ಮರ್ಸ್‌ ಆಲ್ಕೊಬೇವ್‌ ಪ್ರೈ.ಲಿ.ಗೆ ವಿದೇಶಿ ನೇರ ಹೂಡಿಕೆಗೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯು (ಎಫ್‌ಐಪಿಬಿ) ಒಪ್ಪಿಗೆ ನೀಡಿತ್ತು.

ಇದಕ್ಕೆ ಸಂಬಂಧಿಸಿದ ಎಫ್‌ಐಪಿಬಿ ಸಭೆ 2005ರ ಆಗಸ್ಟ್‌ 26ರಂದು ನಡೆದಿದೆ. ಎಎಸ್‌ಪಿಬಿಲ್‌ನಿಂದ ಕತ್ರ ಹೋಲ್ಡಿಂಗ್ಸ್‌ಗೆ 2005ರ ಆಗಸ್ಟ್‌ 20ರಂದು ₹10 ಲಕ್ಷದ ಬಿಲ್‌ ಕಳುಹಿಸಲಾಗಿದೆ. 2005ರ ಸೆಪ್ಟೆಂಬರ್‌ 1ರಂದು ಎಎಸ್‌ಪಿಬಿಎಲ್‌ಗೆ ಹಣ ಸಂದಾಯ ಆಗಿದೆ ಎಂದು ಸಿಬಿಐ ಹೇಳಿದೆ.

ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಎಫ್‌ಐಪಿಬಿ ಶಿಫಾರಸಿನಂತೆ 36 ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆಗೆ ಅನುಮತಿ ಕೊಟ್ಟಿದ್ದಾರೆ ಎಂದು 2005ರ ಸೆಪ್ಟೆಂಬರ್‌ನಲ್ಲಿ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿತ್ತು. ಅದರಲ್ಲಿ ಕತ್ರ ಹೋಲ್ಡಿಂಗ್ಸ್‌ ಕೂಡ ಸೇರಿದೆ.

ಕತ್ರ ಹೋಲ್ಡಿಂಗ್ಸ್‌ ಮತ್ತು ಮೇಸನ್‌ ಎಂಡ್‌ ಸಮ್ಮರ್ಸ್ ಆಲ್ಕೊಬೇವ್‌ ಕಂಪನಿಗಳನ್ನು ಸಂಪರ್ಕಿಸಿ ಪ್ರತಿಕ್ರಿಯೆ ಪಡೆಯಲು ಯತ್ನಿಸಿದರೂ ಅದು ಸಾಧ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.