ADVERTISEMENT

`ಕಾಲಮಿತಿಯಲ್ಲಿ ಬೊಜ್ಜು ಕರಗಿಸಿ'

ಆಂಧ್ರ ಪೊಲೀಸರಿಗೆ ಕಟ್ಟುನಿಟ್ಟಿನ ತಾಕೀತು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಹೈದರಾಬಾದ್: ಆಧುನಿಕ ಜೀವನ ಶೈಲಿಯ ಸಮಸ್ಯೆಯಾಗಿರುವ ಬೊಜ್ಜು ಪೊಲೀಸರನ್ನೂ ಬಿಟ್ಟಿಲ್ಲ. ಆಂಧ್ರ ಪ್ರದೇಶದಲ್ಲಿ ಅಧಿಕ ಸಂಖ್ಯೆಯ ಪೊಲೀಸರು ಬೊಜ್ಜಿನಿಂದ ಬಳಲುತ್ತಿದ್ದು, ತಕ್ಷಣದಿಂದಲೇ ಮೈತೂಕ ಇಳಿಸಿಕೊಂಡು ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳಲು ಸೂಚಿಸಲಾಗಿದೆ.

ಕ್ಷೇತ್ರ ಕಾರ್ಯಕ್ಕೆ ನಿಯೋಜನೆಗೊಂಡಿರುವ ಎಲ್ಲ ಸಿಬ್ಬಂದಿ ಬೊಜ್ಜನ್ನು ನಿಗದಿತ ಕಾಲಮಿತಿಯೊಳಗೆ ಕರಗಿಸಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆಯು ಸುತ್ತೋಲೆ ಹೊರಡಿಸಿದೆ.ಸಮೀಕ್ಷೆಯೊಂದರ ಪ್ರಕಾರ, ರಾಜ್ಯದ 1.2 ಲಕ್ಷ ಪೊಲೀಸ್ ಸಿಬ್ಬಂದಿ ಪೈಕಿ ಶೇ 40ರಷ್ಟು ಸಿಬ್ಬಂದಿ ಬೊಜ್ಜು ಹೊಟ್ಟೆಯವರಾಗಿದ್ದಾರೆ.

`ಇದು ತಕ್ಷಣವೇ ಗಮನ ಹರಿಸಬೇಕಾದ ಗಂಭೀರ ಸಮಸ್ಯೆಯಾಗಿದೆ. ಈ ರೀತಿಯ ಬೊಜ್ಜು ಪೊಲೀಸರ ವರ್ಚಸ್ಸಿಗೆ, ಕಾರ್ಯದಕ್ಷತೆಗೆ ಕುಂದು ತರುತ್ತದೆ'  ಎನ್ನುತ್ತಾರೆ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ.ಪ್ರತಿ ನೌಕರನ ಬೊಜ್ಜಿನ ಪ್ರಮಾಣ ತಿಳಿಯಲು ಇಲಾಖೆ ಆರೋಗ್ಯ ತಪಾಸಣೆ ನಡೆಸಲಿದೆ.

ಅಧಿಕ ತೂಕದವರಿಗೆ ದಿನಕ್ಕೆ ಕನಿಷ್ಠ ಎರಡು ಕಿ.ಮೀ. ಓಡಿ, ಜತೆಗೆ ಯೋಗ- ಧ್ಯಾನ ಮಾಡಲು ಸೂಚಿಸಲಾಗುವುದು. ನಿಗದಿತ ಅವಧಿಗೊಮ್ಮೆ ಸಿಬ್ಬಂದಿ ತೂಕ ಅಳೆದುಕೊಳ್ಳಲು ಅನುಕೂಲವಾಗುವಂತೆ ಎಲ್ಲಾ ಠಾಣೆಗಳಲ್ಲೂ ತೂಕದ ಯಂತ್ರಗಳನ್ನು ಅಳವಡಿಸುವ ಪ್ರಸ್ತಾವ ಇಲಾಖೆಯ ಮುಂದಿದೆ ಎಂದೂ ಮೂಲಗಳು ಹೇಳಿವೆ.

ವಾರ್ಷಿಕ ವೇತನ ಹೆಚ್ಚಳ ಮತ್ತು ಬಡ್ತಿ ನೀಡುವ ವೇಳೆ ದೈಹಿಕ ಸಾಮರ್ಥ್ಯ, ವ್ಯಕ್ತಿತ್ವ ವಿಕಸನ, ತರಬೇತಿ ಇತ್ಯಾದಿಗಳನ್ನು ಪರಿಗಣಿಸುವ ಕುರಿತೂ ಇಲಾಖೆ ಚಿಂತಿಸುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.