ADVERTISEMENT

ಕಾವೇರಿ: ತಮಿಳುನಾಡು ತಗಾದೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST

ನವದೆಹಲಿ: ತನ್ನ ಪಾಲಿನಲ್ಲಿ ಕೊರತೆಯಾಗಿರುವ 48 ಟಿಎಂಸಿ ನೀರು ತುಂಬಿಕೊಡಲು ಸಂಕಷ್ಟ ಸ್ಥಿತಿಯ ನೀರು ಹಂಚಿಕೆ ಸೂತ್ರದಂತೆ ಪ್ರತಿದಿನ 2 ಟಿಎಂಸಿ ಅಡಿ   ನೀರು ಬಿಡಲು ಕರ್ನಾಟಕಕ್ಕೆ ಸೂಚನೆ ನೀಡುವಂತೆ ತಮಿಳುನಾಡು ಬುಧವಾರ ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದೆ.

ತನ್ನ ಪಾಲಿನ ನೀರಿನ ಲಭ್ಯತೆಯಲ್ಲೇ ಕೊರತೆ ಇರುವುದರಿಂದ ನಿತ್ಯ 2 ಟಿಎಂಸಿ ಅಡಿ ನೀರು ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಮಂಗಳವಾರ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಇದಕ್ಕೆ ಪ್ರತಿವಾದ ಮಂಡಿಸಿರುವ ತಮಿಳುನಾಡು, ಅಕ್ಟೋಬರ್ 16ರಿಂದ 31ರವರೆಗೆ 8.85 ಟಿಎಂಸಿ ಅಡಿ ನೀರು ಬಿಡುವಂತೆ ಕಾವೇರಿ ನಿಯಂತ್ರಣ ಸಮಿತಿ (ಸಿಎಂಸಿ)  ಶಿಫಾರಸು ಮಾಡಿರುವುದು ಸಮರ್ಪಕವಾಗಿಲ್ಲ. ಇದು ತಮಿಳುನಾಡಿನ ಅಗತ್ಯವನ್ನು ಪೂರೈಸುವುದಿಲ್ಲ ಎಂದು ತಗಾದೆ ತೆಗೆದಿದೆ.

14.53 ಲಕ್ಷ ಎಕರೆ ಭೂಮಿಯಲ್ಲಿ ಬೆಳೆದಿರುವ ಸಂಬಾ ಬೆಳೆಯನ್ನು ಉಳಿಸಿಕೊಳ್ಳಲು ತನಗೆ ನೀರಿನ ಅಗತ್ಯವಿದೆ ಎಂದು  ಹೇಳಿದೆ.

ತಮಿಳುನಾಡಿಗೆ ಬಿಡಬೇಕಿದ್ದ 1,89,000 ಕ್ಯೂಸೆಕ್ ನೀರಿನ ಬದಲಾಗಿ ಈಗಾಗಲೇ 2,07,000 ಕ್ಯೂಸೆಕ್ ನೀರು ಬಿಡಲಾಗಿದೆ ಎಂಬ ಕರ್ನಾಟಕದ ವಾದದಲ್ಲಿ ಹುರುಳಿಲ್ಲ.

ಅಕ್ಟೋಬರ್ 11ರಂದು ನಡೆದ `ಸಿಎಂಸಿ~ ಸಭೆಯಲ್ಲಿ `ಬಿಳಿಗುಂಡ್ಲು~ ನಲ್ಲಿ ಹರಿದ ನೀರಿನ ಪ್ರಮಾಣ ಕುರಿತು `ಸಿಎಂಸಿ~ ಮತ್ತು `ಕರ್ನಾಟಕ~ ನೀಡಿರುವ ದಾಖಲೆಗಳಲ್ಲಿ ವ್ಯತ್ಯಾಸವಿದೆ ಎಂದೂತಮಿಳುನಾಡು ಹೇಳಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.