ADVERTISEMENT

ಕಾವೇರಿ ನ್ಯಾಯಮಂಡಳಿ ಐತೀರ್ಪು: ತಿಂಗಳಾಂತ್ಯಕ್ಕೆ ಅಂತಿಮ ಆದೇಶ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 22:00 IST
Last Updated 7 ಡಿಸೆಂಬರ್ 2012, 22:00 IST

ನವದೆಹಲಿ: ಹಲವು ವರ್ಷಗಳಿಂದ ಕರ್ನಾಟಕ ಮತ್ತು ತಮಿಳುನಾಡು ಜನರ ನೆಮ್ಮದಿಗೆ ತೀವ್ರ ಭಂಗ ತಂದಿರುವ ಕಾವೇರಿ ನದಿ ವಿವಾದಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ, ಕಾವೇರಿ ನ್ಯಾಯಮಂಡಳಿ ನೀಡಿದ ಐತೀರ್ಪಿನ ಕುರಿತು ಈ ತಿಂಗಳ ಕೊನೆಯ ವೇಳೆಗೆ ಅಂತಿಮ ಅಧಿಸೂಚನೆ ಹೊರಡಿಸುವುದಾಗಿ ಶುಕ್ರವಾರ ಕಾವೇರಿ ಜಲಾನಯದ ಪ್ರದೇಶದ ರಾಜ್ಯಗಳಿಗೆ ತಿಳಿಸಲಾಯಿತು.

ಈ ತಿಂಗಳ ಕೊನೆಯ ವೇಳೆ ಅಧಿಸೂಚನೆ ಹೊರಡಿಸುವ ನಿಟ್ಟಿನಲ್ಲಿ ಅಗತ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕಾವೇರಿ ನಿರ್ವಹಣಾ ಸಮಿತಿ (ಸಿಎಂಸಿ)ಯ ಅಧ್ಯಕ್ಷ, ಜಲ ಸಂಪನ್ಮೂಲ ಕಾರ್ಯದರ್ಶಿ ಡಿ. ವಿ. ಸಿಂಗ್ ಅವರು ಶುಕ್ರವಾರ ನಡೆದ  ಸಿಎಂಸಿ ಸಭೆಯಲ್ಲಿ  ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳಿಗೆ ತಿಳಿಸಿದರು.

ನೀರು ಹಂಚಿಕೆ ಸಂಬಂಧಿಸಿದಂತೆ ಮಧ್ಯಂತರ ಆದೇಶ ನೀಡುವ ಕುರಿತು ಈ ಸಭೆ ಕರೆಯಲಾಗಿತ್ತು. ತೀರ್ಪು ಕುರಿತ ಗೆಜೆಟ್ ಅಧಿಸೂಚನೆ ಜಾರಿಗೆ ಬಂದೊಡನೆ ಪ್ರಧಾನಮಂತ್ರಿ ಅಧ್ಯಕ್ಷರಾಗಿರುವ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಮತ್ತು ಸಿಎಂಸಿಗಳನ್ನು ವಿಸರ್ಜಿಲಾಗುತ್ತದೆ.

ನ್ಯಾಯಮೂರ್ತಿ ಎನ್. ಪಿ. ಸಿಂಗ್ ನೇತೃತ್ವದ, ಎನ್. ಎಸ್. ರಾವ್ ಮತ್ತು ಸುಧೀರ್ ನಾರಾಯಣ್ ಅವರನ್ನೊಳಗೊಂಡ ಪ್ರಾಧಿಕಾರವು 2007ರಲ್ಲಿ  ಸರ್ವಾನುಮತದಿಂದ ನೀಡಿದ ತೀರ್ಪಿನಲ್ಲಿ ಕಾವೇರಿ ಜಲಾನಯನದಲ್ಲಿ ಒಟ್ಟು 740ಟಿಎಂಸಿ ನೀರು ಲಭ್ಯವಿದೆ ಎಂದು ತಿಳಿಸಿತ್ತು.

1990ರಲ್ಲಿ ರಚನೆಗೊಂಡ ಈ ಪ್ರಾಧಿಕಾರವು ಸುಮಾರು 16 ವರ್ಷಗಳ ಕಾಲ ಕಾವೇರಿ ವಿವಾದದ ವಿಚಾರಣೆ ನಡೆಸಿತ್ತು. ಜೊತೆಗೆ ತಮಿಳುನಾಡಿಗೆ 419 ಟಿಎಂಸಿ (ಬೇಡಿಕೆ ಇಟ್ಟಿದ್ದು 562 ಟಿಎಂಸಿ ನೀರಿಗೆ), ಕರ್ನಾಟಕಕ್ಕೆ 270 ಟಿಎಂಸಿ (465 ಟಿಎಂಸಿ), ಕೇರಳಕ್ಕೆ 30 ಟಿಎಂಸಿ ಮತ್ತು ಪುದುಚೇರಿಗೆ 7 ಟಿಎಂಸಿ ನೀರು ಹಂಚಿಕೆ ಸೂತ್ರದ ಮೂಲಕ `ಸಮತೋಲಿತ' ತೀರ್ಪನ್ನು ನೀಡಿತ್ತು.

ಕೇಂದ್ರದ ಅಧಿಸೂಚನೆ ಹೊರಡಿಸಿದ 90 ದಿನಗಳೊಳಗಾಗಿ ಪ್ರಾಧಿಕಾರದ ತೀರ್ಪು ಜಾರಿಗೆ ಬರಲಿದೆ. ಕಾವೇರಿ ಜಲಾನಯದ ಪ್ರದೇಶದ ಪ್ರತಿನಿಧಿಗಳು ಮತ್ತು ಕೃಷಿ ಮತ್ತು ಜಲವಿಜ್ಞಾನ ಪರಿಣತರನ್ನೊಳಗೊಂಡ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣಾ ಸಮತಿಯಂತಹ ನೂತನ ಸಂಸ್ಥೆಗಳನ್ನು ರಚಿಸಲಾಗುವುದು. ಕೇಂದ್ರದ ನಿಯಂತ್ರಣದಲ್ಲಿರುವ ಈ ಸಂಸ್ಥೆಗಳಿಗೆ ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಅಧ್ಯಕ್ಷರಾಗಲಿದ್ದಾರೆ.

`ಹೊಸ ಸಂಸ್ಥೆಗಳ ರಚನೆಯೊಂದಿಗೆ ಕಾವೇರಿ ವಿವಾದವನ್ನು ಬಾಹ್ಯ ಪ್ರಭಾವವಿಲ್ಲದೆ ಬಗೆಹರಿಸುವ ನಿರೀಕ್ಷೆ ಹೊಂದಲಾಗಿದೆ. ನೀರು ಹಂಚಿಕೆ ಕುರಿತಂತೆ ಬಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿ ಮತ್ತು ತುಂಗಭದ್ರಾ ಮಂಡಳಿ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದವುೆ ಎಂದು ಸಿಎಂಸಿ ತಿಳಿಸಿದೆ.

`ಮಾಪನ ಕೇಂದ್ರ ಬದಲಾವಣೆಗೆ ಅವಕಾಶವಿಲ್ಲ'

ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನ ಪ್ರಕಾರ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರಿನ ಮಾಪನವನ್ನು ಬಿಳಿಗುಂಡ್ಲುನಲ್ಲಿಯೇ ಮಾಡಬೇಕು. ಮಾಪನ ಕೇಂದ್ರವನ್ನು ಬಿಳಿಗುಂಡ್ಲುವಿನಿಂದ ಮೆಟ್ಟೂರಿಗೆ ಸ್ಥಳಾಂತರ ಮಾಡಿದರೆ ನ್ಯಾಯಮಂಡಳಿ ನೀಡಿರುವ ತೀರ್ಪಿನ ಉಲ್ಲಂಘನೆ ಆಗುತ್ತದೆ.

ನ್ಯಾಯಮಂಡಳಿಯು ಮಧ್ಯಂತರ ತೀರ್ಪಿನಲ್ಲಿ ಮೆಟ್ಟೂರು ಬಳಿ ಮಾಪನ ಕೇಂದ್ರ ಇರಬೇಕು ಎಂದು ಹೇಳಿತ್ತು. ಆದರೆ, ಅಂತಿಮ ತೀರ್ಪಿನಲ್ಲಿ ಬಿಳಿಗುಂಡ್ಲುನಲ್ಲೇ ಇರಬೇಕು ಎಂದು ಹೇಳಿದೆ. ಅದನ್ನು ಬದಲಾವಣೆ ಮಾಡಿ ಎಂದು ಹೇಳುವ ಅಧಿಕಾರ ಕಾವೇರಿ ಉಸ್ತುವಾರಿ ಸಮಿತಿಗೆ (ಸಿಎಂಸಿ) ಇಲ್ಲ.
ಬಿಳಿಗುಂಡ್ಲುನಲ್ಲಿ ಕೇಂದ್ರ ಜಲ ಆಯೋಗದ ಮಾಪನ ಕೇಂದ್ರ ಇರುವುದರಿಂದ ನೀರಿನ ಅಳತೆಯ ಮಾಹಿತಿ ನಿಖರವಾಗಿರುತ್ತದೆ. ಆದರೆ, ಮೆಟ್ಟೂರಿನಲ್ಲಿ ಮಾಪನ ಮಾಡಿದರೆ ತಮಿಳುನಾಡು ತನಗೆ ಅನುಕೂಲವಾಗುವ ಹಾಗೆ ಅಂಕಿ ಅಂಶಗಳನ್ನು ದಾಖಲಿಸುವ ಸಾಧ್ಯತೆಗಳಿವೆ. ನ್ಯಾಯಮಂಡಳಿಯ ಮಧ್ಯಂತರ ಆದೇಶದ ಪ್ರಕಾರ ತಮಿಳುನಾಡಿಗೆ ವರ್ಷಕ್ಕೆ 205 ಟಿಎಂಸಿ ಅಡಿ ನೀರು ಬಿಡಬೇಕು. ಆದರೆ, ಎರಡೂ ರಾಜ್ಯಗಳಲ್ಲಿ ಉತ್ತಮ ಮಳೆಯಾಗದೆ ನೀರಿನ ಕೊರತೆ ಇದ್ದಾಗ ಸಂಕಷ್ಟ ಸೂತ್ರವನ್ನು ಪಾಲಿಸಬೇಕಾಗುತ್ತದೆ.

ಅಂತಿಮ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿ ನ್ಯಾಯಮಂಡಳಿಗೆ ಸಲ್ಲಿಸಿರುವ ಅರ್ಜಿ ಇನ್ನೂ ಇತ್ಯರ್ಥವಾಗಿಲ್ಲ. ಇದಲ್ಲದೆ ಸುಪ್ರೀಂಕೋರ್ಟ್‌ನಲ್ಲೂ ಇದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಬಾಕಿ ಇದೆ.

ಹೀಗಾಗಿ ನ್ಯಾಯಮಂಡಳಿಯ ತೀರ್ಪು ಜಾರಿ ಸಂಬಂಧ ಈ ತಿಂಗಳ ಅಂತ್ಯದ ಒಳಗೆ ಅಧಿಸೂಚನೆ ಹೊರಡಿಸಲು ಸಾಧ್ಯವಿಲ್ಲ.
- ಕ್ಯಾ. ರಾಜಾರಾವ್, ನೀರಾವರಿ ತಜ್ಞರು

`ಸಮಿತಿಗೆ ಅಧಿಕಾರವೇ ಇಲ್ಲ'
ಕಾವೇರಿ ಉಸ್ತುವಾರಿ ಸಮಿತಿಗೆ (ಸಿಎಂಸಿ) ಸೀಮಿತವಾದ ಅಧಿಕಾರವಿದೆ. ಅದು ಕೇವಲ ಶಿಫಾರಸು ಮಾಡಬಹುದು ಅಷ್ಟೇ. ನ್ಯಾಯಮಂಡಳಿಯ ತೀರ್ಪಿಗೆ ವಿರುದ್ಧವಾಗಿ ಬದಲಾವಣೆಗಳನ್ನು ಮಾಡಿ ಎಂದು ಹೇಳುವ ಅಧಿಕಾರವಿಲ್ಲ.

ನೀರಿನ ಮಾಪನ ಕೇಂದ್ರವನ್ನು ಬಿಳಿಗುಂಡ್ಲುನಿಂದ ಮೆಟ್ಟೂರಿಗೆ ಸ್ಥಳಾಂತರಿಸಿ, ಕೇಂದ್ರ ಜಲ ಆಯೋಗದ ಮಾಪನ ಘಟಕವನ್ನೇ ಅಲ್ಲಿ ಸ್ಥಾಪಿಸಬೇಕು ಎಂದು ಹಲವು ವರ್ಷಗಳ ಹಿಂದೆ ಒತ್ತಾಯ ಮಾಡಿದ್ದೇವೆ. ಆದರೆ, ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ಬಿಳಿಗುಂಡ್ಲುನಲ್ಲೇ ಮಾಪನ ಕೇಂದ್ರ ಇರಬೇಕು ಎಂದು ಹೇಳಿದೆ.

ನ್ಯಾಯಮಂಡಳಿಯ ಅಂತಿಮ ತೀರ್ಪು ಜಾರಿಯಾದರೆ ಕಾವೇರಿ ನದಿ ಪ್ರಾಧಿಕಾರ, ಉಸ್ತುವಾರಿ ಸಮಿತಿ ಅಸ್ತಿತ್ವ ಕಳೆದುಕೊಳ್ಳುತ್ತವೆ. ಹೊಸದಾಗಿ ರಚನೆಯಾಗುವ ಅನುಷ್ಠಾನ ಮಂಡಳಿಯೇ ಎಲ್ಲ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅಲ್ಲಿ ಆಗುವ ನಿರ್ಣಯಗಳನ್ನು ಜಾರಿ ಮಾಡಬೇಕಾಗುತ್ತದೆ. ನಮ್ಮಲ್ಲಿ ನೀರು ಇಲ್ಲ, ಸಂಕಷ್ಟ ಇದೆ ಎಂದು ಹೇಳಿದರೂ ಕೇಳುವವರು ಇರುವುದಿಲ್ಲ.
- ಎಚ್.ಕೆ.ಪಾಟೀಲ, ಮಾಜಿ ನೀರಾವರಿ ಸಚಿವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT