ADVERTISEMENT

ಕಾವೇರಿ ವಿವಾದ: ನ.29ರಂದು ಶೆಟ್ಟರ- ಜಯಾ ಮುಖಾಮುಖಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2012, 12:02 IST
Last Updated 27 ನವೆಂಬರ್ 2012, 12:02 IST
ಕಾವೇರಿ ವಿವಾದ: ನ.29ರಂದು ಶೆಟ್ಟರ- ಜಯಾ ಮುಖಾಮುಖಿ ಚರ್ಚೆ
ಕಾವೇರಿ ವಿವಾದ: ನ.29ರಂದು ಶೆಟ್ಟರ- ಜಯಾ ಮುಖಾಮುಖಿ ಚರ್ಚೆ   

ಚೆನ್ನೈ (ಪಿಟಿಐ): ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವ ಯತ್ನವಾಗಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಗುರುವಾರ ಬೆಂಗಳೂರಿನಲ್ಲಿ ಕರ್ನಾಟಕ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಲಿದ್ದಾರೆ.

ಸೂಕ್ಷ್ಮವಾದ ಜಲ ವಿವಾದ ವಿಚಾರದಲ್ಲಿ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ಸಲುವಾಗಿ ಮುಖಾಮುಖಿ ಮಾತುಕತೆ ನಡೆಸುವಂತೆ ಸುಪ್ರೀಂಕೋರ್ಟ್ ಸೋಮವಾರ ಉಭಯ ಮುಖ್ಯಮಂತ್ರಿಗಳಿಗೆ ತಾಕೀತು ಮಾಡಿದ ಹಿನ್ನೆಲೆಯಲ್ಲಿ ಈ ಭೇಟಿ ನಡೆಯಲಿದೆ.

ಸುಪ್ರೀಂಕೋರ್ಟ್ ಸಲಹೆಯಂತೆ ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾತುಕತೆ ನಡೆಸುವ ಸಲುವಾಗಿ ನವೆಂಬರ್ 29ರಂದು ಮುಖ್ಯಮಂತ್ರಿಯವರು ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡುವರು ಎಂದು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿರುವ ಪ್ರಕಟಣೆ ತಿಳಿಸಿದೆ.

'ಉಭಯ ಮುಖ್ಯಮಂತ್ರಿಗಳು ಏಕೆ ಒಟ್ಟಿಗೆ ಕುಳಿತುಕೊಳ್ಳಲಾಗುವುದಿಲ್ಲ? ಇದಕ್ಕಾಗಿ ಪ್ರಯತ್ನಿಸಿ. ಅದು ಅಸಾಧ್ಯವಾದದ್ದೇನಲ್ಲ' ಎಂದು ನ್ಯಾಯಮೂರ್ತಿಗಳಾದ ಡಿ.ಕೆ. ಜೈನ್ ಮತ್ತು ಮದನ್ ಬಿ. ಲೋಕೂರ್ ಅವರನ್ನು ಒಳಗೊಂಡ ಪೀಠ ಸೋಮವಾರ ಹೇಳಿತ್ತು.

'ನೀವು ಸೌಹಾರ್ದಯುತ ಪರಿಸರದಲ್ಲಿ  ಸಭೆ ನಡೆಸಬೇಕು ಮತ್ತು ಉಭಯ ರಾಜ್ಯಗಳ ರೈತರ ವಿಶಾಲ ಹಿತಾಸಕ್ತಿಗಳ ವಿಷಯವನ್ನು ಚರ್ಚಿಸಬೇಕು ಎಂದು ನಾವು ಬಯಸುತ್ತೇವೆ' ಎಂದು ಪೀಠ ಹೇಳಿತ್ತು.

'ಪ್ರಧಾನಿ ನೇತೃತ್ವದ ಕಾವೇರಿ ನದಿ ಪ್ರಾಧಿಕಾರಕ್ಕೆ ಸಭೆ ನಡೆಸುವುದು ಸಾಧ್ಯವಿಲ್ಲ, ಆದ್ದರಿಂದ ಪರಿಹಾರ ಕಂಡು ಹಿಡಿಯಲು ರಾಜ್ಯ ಸರ್ಕಾರಗಳು ಸಭೆ ಸೇರಬೇಕು' ಎಂದೂ ಪೀಠ ಸಲಹೆ ಮಾಡಿತ್ತು.

'ಕೊಡು-ಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ. ಮುಖ್ಯಮಂತ್ರಿಗಳು ಕೇವಲ ಕಾಫಿ ಕುಡಿಯುವ ಸಲುವಾಗಿ ಸಭೆ ಸೇರುವುದಲ್ಲ, ಪರಿಹಾರ ಕಂಡು ಹಿಡಿಯಲು ತಜ್ಞರ ತಂಡದೊಂದಿಗೆ ಭೇಟಿ ಮಾಡಿ ಮಾತುಕತೆ ನಡೆಸಬೇಕು' ಎಂದೂ ಪೀಠ ಸೂಚನೆ ನೀಡಿತ್ತು.

'ಮುಖಾಮುಖಿ ಮಾತುಕತೆ ನಡೆಸುವಂತೆ' ಉಭಯ ಮುಖ್ಯಮಂತ್ರಿಗಳನ್ನೂ ಒತ್ತಾಯಿಸಿದ ನ್ಯಾಯಾಲಯ  ವಿಷಯವನ್ನು ನಿರ್ದೇಶನಗಳಿಗಾಗಿ ಶುಕ್ರವಾರ ತನ್ನ ಮುಂದೆ ತರುವಂತೆ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.