ADVERTISEMENT

ಕಾಶ್ಮೀರಕ್ಕೆ ಚಿದಂಬರಂ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಜಮ್ಮು(ಪಿಟಿಐ):  ಜಮ್ಮು- ಕಾಶ್ಮೀರ ದಲ್ಲಿ ಭದ್ರತೆಯನ್ನು ಪರಿಶೀಲಿಸಲು ಮಂಗಳವಾರ ಇಲ್ಲಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಮಾತಾ ವೈಷ್ಣೋವದೇವಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.

ಬೆಳಿಗ್ಗೆ ಜಮ್ಮುವಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಚಿದಂಬರಂ ಅವರನ್ನು ಜಮ್ಮು-ಕಾಶ್ಮೀರದ ಉಪಮುಖ್ಯಮಂತ್ರಿ ತಾರಾಚಂದ್ ಮತ್ತು ರಾಜ್ಯದ ಗೃಹ ಸಚಿವ ನಾಸೀರ್ ಅಸ್ಲಾಂ ವಾನಿ ಬರಮಾಡಿಕೊಂಡರು.
ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ವೈಷ್ಣೋವದೇವಿ ದೇಗುಲಕ್ಕೆ ಹೊರಟ ಚಿದಂಬರಂ ಅವರ ಜೊತೆ ರಾಜ್ಯಪಾಲ ಎನ್.ಎನ್. ವೊಹ್ರಾ ಸಹ ಇದ್ದರು. ದೇವಿ ದರ್ಶನದ ನಂತರ ಚಿದಂಬರಂ ಜಮ್ಮುವಿನಲ್ಲಿ ಭದ್ರತೆ ಪುನರ್‌ಪರಿಶೀಲನೆ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಈ ಸಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.
 ರಾಜಭವನದಲ್ಲಿ ರಾಜ್ಯಪಾಲರ ಜೊತೆ ಕೆಲವು ಪ್ರಮುಖ ವಿಷಯಗಳ ಕುರಿತು ಚಿದಂಬರಂ ಚರ್ಚಿಸಿದರು.

ಜಮ್ಮು -ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ  ಸೈಫುದ್ದೀನ್ ಸೋಜ್ ಅವರ ನೇತೃತ್ವದ ನಿಯೋಗವು ಚಿದಂಬರಂ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಪಕ್ಷದ ಬೆಳವಣಿಗೆ ಬಗ್ಗೆ ವಿವರಗಳನ್ನು ನೀಡಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.