ADVERTISEMENT

ಕಾಶ್ಮೀರ ಕಣಿವೆ ಮತ್ತೆ ಪ್ರಕ್ಷುಬ್ಧ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಲಷ್ಕರ್‌ನ ಸ್ಥಳೀಯ ಕಮಾಂಡರ್ ಜುನೈದ್ ಮಟ್ಟೊ ಅಂತ್ಯ ಸಂಸ್ಕಾರದ ವೇಳೆ ಕಾಶ್ಮೀರದ ಖುಂಡ್ವಾನಿಯಲ್ಲಿ ಸೇರಿದ್ದ ಜನ –ಎಎಫ್‌ಪಿ ಚಿತ್ರ
ಲಷ್ಕರ್‌ನ ಸ್ಥಳೀಯ ಕಮಾಂಡರ್ ಜುನೈದ್ ಮಟ್ಟೊ ಅಂತ್ಯ ಸಂಸ್ಕಾರದ ವೇಳೆ ಕಾಶ್ಮೀರದ ಖುಂಡ್ವಾನಿಯಲ್ಲಿ ಸೇರಿದ್ದ ಜನ –ಎಎಫ್‌ಪಿ ಚಿತ್ರ   

ಶ್ರೀನಗರ: ಇಬ್ಬರು ನಾಗರಿಕರನ್ನು ಬಲಿ ಪಡೆದ ಪೊಲೀಸ್‌ ಎನ್‌ಕೌಂಟರ್‌ ಖಂಡಿಸಿ ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್‌ನಿಂದ ಶನಿವಾರ ಕಾಶ್ಮೀರ ಕಣಿವೆ ಬಹುತೇಕ ಸ್ತಬ್ಧಗೊಂಡಿತ್ತು.

ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಅಂಗಡಿ, ವಾಣಿಜ್ಯ ಮಳಿಗೆ, ಪೆಟ್ರೋಲ್‌ ಬಂಕ್‌ ಮುಚ್ಚಲಾಗಿತ್ತು. ವಾಹನ ಮತ್ತು ಜನರ ಸಂಚಾರ ಇಲ್ಲದೆ ರಸ್ತೆಗಳು ಬಿಕೊ ಎನ್ನುತ್ತಿದ್ದವು. ಮುಂಜಾಗ್ರತಾ ಕ್ರಮವಾಗಿ  ಭಾರಿ ಬಂದೋಬಸ್ತ್‌ ಮಾಡಿದ ಕಾರಣ ಯಾವುದೇ ಅಹಿತಕರ ಘಟನೆ ನಡೆದಿಲ್ಲ.  

ಗನ್‌ ಸೆಲ್ಯೂಟ್‌: ಅನಂತನಾಗ್ ಜಿಲ್ಲೆಯ ಅರ್ವಾನಿ ಗ್ರಾಮದಲ್ಲಿ ಶುಕ್ರವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಲಷ್ಕರ್–ಎ–ತಯಬಾ ಕುಲ್ಗಾಂ ಜಿಲ್ಲಾ ಕಮಾಂಡರ್ ಜುನೈದ್ ಮಟ್ಟೂ ಸೇರಿ ಮೂವರು ಉಗ್ರರ ಅಂತ್ಯಕ್ರಿಯೆ ಶನಿವಾರ ನಡೆಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಲಷ್ಕರ್–ಎ–ತಯಬಾ ಮತ್ತು  ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಉಗ್ರರು ‘ಗನ್ ಸೆಲ್ಯೂಟ್’ ನೀಡಿದರು ಎಂದು ವರದಿಯಾಗಿದೆ.

ಈ ನಡುವೆ ಮತ್ತೊಂದೆಡೆ ಉಗ್ರರ ದಾಳಿಗೆ ಬಲಿಯಾದ ಠಾಣಾಧಿಕಾರಿ ಫಿರೋಜ್‌ ಅಹಮ್ಮದ್‌ ದರ್‌ ಹಾಗೂ ಇತರ ಪೊಲೀಸರ ಅಂತ್ಯಕ್ರಿಯೆ ಕುಟುಂಬ ಸದಸ್ಯರ ಆಕ್ರಂದನದ ಮಧ್ಯೆ  ನಡೆಯಿತು.

ಮತ್ತೆ ಉಗ್ರರ ದಾಳಿ: ಅನಂತನಾಗ್ ಜಿಲ್ಲೆಯ ಬಿಜ್‌ಬೆಹರದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಶಿಬಿರದ ಮೇಲೆ ಉಗ್ರರು ಶನಿವಾರ ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ. ಭದ್ರತಾ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದಾಗ ಉಗ್ರರು ಪರಾರಿಯಾಗಿದ್ದಾರೆ. ಯಾವುದೇ ಸಾವು, ನೋವಿನ ವರದಿಯಾಗಿಲ್ಲ.

ಅಧಿವೇಶನ ಮುಂದಕ್ಕೆ: ಎನ್‌ಕೌಂಟರ್‌ನಲ್ಲಿ ನಾಗರಿಕರ ಸಾವು ಮತ್ತು ವಿದ್ಯಾರ್ಥಿಗಳ ಮೇಲೆ ‘ಪಿಲ್ಲೆಟ್‌’ ಬಳಕೆ ಖಂಡಿಸಿ ನ್ಯಾಷನಲ್ ಕಾನ್ಫರೆನ್‌್ಸ ಮತ್ತು ಕಾಂಗ್ರೆಸ್ ಶಾಸಕರು ಶ್ರೀನಗರದಲ್ಲಿ ವಿಧಾನಸಭೆಯ ಮುಂದೆ ಧರಣಿ ನಡೆಸಿದರು.

ಇದರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲು ಕರೆಯಲಾಗಿದ್ದ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಮುಂದೂಡಲಾಯಿತು.
*
ಬಂದೂಕು ಇಲ್ಲವೇ ಸೇನೆಯಿಂದ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಸಾಧ್ಯವಿಲ್ಲ. ಮಾತುಕತೆಯಿಂದ ಮಾತ್ರ ಈ ಕೆಲಸ ಸಾಧ್ಯ.
ಮೆಹಬೂಬಾ ಮುಫ್ತಿ
ಮುಖ್ಯಮಂತ್ರಿ, ಜಮ್ಮು ಮತ್ತು ಕಾಶ್ಮೀರ
*
ಕಾಶ್ಮೀರದಲ್ಲಿಯ ಪರಿಸ್ಥಿತಿ ಅಂದುಕೊಂಡಷ್ಟು ಕೆಟ್ಟಿಲ್ಲ. ಪರಿಸ್ಥಿತಿ  ಸಂಪೂರ್ಣ ನಿಯಂತ್ರಣದಲ್ಲಿದೆ. ಶಾಂತಿ ಸ್ಥಾಪನೆಗಾಗಿ ಸೇನೆ ಅವಿರತ ಶ್ರಮಿಸುತ್ತಿದೆ.
ಬಿಪಿನ್‌ ರಾವತ್‌
ಭೂಸೇನಾ ಮುಖ್ಯಸ್ಥ
*
ಪೊಲೀಸರ ಹತ್ಯೆಯು ಉಗ್ರರ ಅತ್ಯಂತ ಹೇಯ ಮತ್ತು ಹೇಡಿ ಕೃತ್ಯ. ಹುತಾತ್ಮ ಯೋಧರಿಗೆ ನಮನಗಳು.
ಅರುಣ್ ಜೇಟ್ಲಿ,
ರಕ್ಷಣಾ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.