ನವದೆಹಲಿ (ಪಿಟಿಐ): ಸಂಸದ ಕುನ್ವರ್ ಮನ್ವೇಂದ್ರಸಿಂಗ್ ಸೇರಿದಂತೆ 19 ಜನರು ವಿವಿಧ ಪತ್ರಿಕೆಗಳ ವಿರುದ್ಧ ಕಾಸಿಗಾಗಿ ಸುದ್ದಿ ಪ್ರಕಟಿಸಿದ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿಗೆ ದೂರು ನೀಡಿದ್ದಾರೆ ಎಂದು ಮಂಗಳವಾರ ಲೋಕಸಭೆಗೆ ತಿಳಿಸಲಾಯಿತು. ಸಮಾಚಾರ ಮತ್ತು ಪ್ರಸಾರ ಖಾತೆಯ ಸಚಿವೆ ಅಂಬಿಕಾ ಸೋನಿ ಅವರು ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.
ದೈನಿಕ್ ಜಾಗರಣ್, ಹಿಂದೂಸ್ತಾನ್, ದ ಟ್ರಿಬ್ಯೂನ್, ದ ಹಿಂದೂ, ದಿನಮಲರ್, ದೈನಿಕ್ ಭಾಸ್ಕರ್, ಪಂಜಾಬ್ ಕೇಸರಿ, ದಿನಕರನ್, ತಮಿಳು ಮುರಾಸು, ಡೈಲಿ ತಂತಿ, ಮಾಲಾಯಿ ಮಲಾರ್ ಮತ್ತು ಅಮರ್ ಉಜಾಲಾ ವಿರುದ್ಧ ಕಾಸಿಗಾಗಿ ಸುದ್ದಿ ಪ್ರಕಟಿಸಿದ ದೂರುಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ. ವ್ಯಕ್ತಿಗಳು, ಸಂಸ್ಥೆಗಳು ಮತ್ತು ಕಂಪೆನಿಗಳ ಬಗ್ಗೆ ಜಾಹೀರಾತಾಗಿ ಪ್ರಕಟವಾಗಬೇಕಾದ ವಿಚಾರಗಳನ್ನು ಕಾಸು ಪಡೆದು ಸುದ್ದಿಯಾಗಿ ಪ್ರಕಟಿಸಿದ ಮತ್ತು ಪ್ರಸಾರ ಮಾಡಿದ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ವರದಿಗಳು ಬಂದಿವೆ ಎಂದು ಸೋನಿಯಾ ತಿಳಿಸಿದ್ದಾರೆ. ಕಾಸಿಗಾಗಿ ಸುದ್ದಿಯ ಬಗ್ಗೆ ಭಾರತೀಯ ಪತ್ರಿಕಾ ಮಂಡಳಿ ಸಲ್ಲಿಸಿರುವ ವರದಿಯನ್ನು ಸಚಿವರ ತಂಡವು ಪರಿಶೀಲಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.