ADVERTISEMENT

‘ಕುರಾನ್‌ ಮತ್ತು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯ ಸಾಧಿಸಿ’

ಮುಸ್ಲಿಂ ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:30 IST
Last Updated 1 ಮಾರ್ಚ್ 2018, 19:30 IST
ರಾಷ್ಟ್ರಪತಿ ಭವನದ ಮುಂಭಾಗ ಜೊರ್ಡಾನ್‌ನ ಎರಡನೇ ದೊರೆ ಅಬ್ದುಲ್ಲಾ, ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು ಹೀಗೆ –ಪಿಟಿಐ ಚಿತ್ರ
ರಾಷ್ಟ್ರಪತಿ ಭವನದ ಮುಂಭಾಗ ಜೊರ್ಡಾನ್‌ನ ಎರಡನೇ ದೊರೆ ಅಬ್ದುಲ್ಲಾ, ರಾಷ್ಟ್ರಪತಿ ರಾಮನಾಥ ಕೋವಿಂದ ಮತ್ತು ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಂಡಿದ್ದು ಹೀಗೆ –ಪಿಟಿಐ ಚಿತ್ರ   

ನವದೆಹಲಿ: ‘ಭಾರತದಲ್ಲಿನ ಮುಸ್ಲಿಂ ಯುವಕರು ಕುರಾನ್‌ ಮತ್ತು ಕಂಪ್ಯೂಟರ್‌ನಲ್ಲಿ ಪ್ರಾವೀಣ್ಯತೆ ಸಾಧಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಭಾರತದ ಪ್ರವಾಸದಲ್ಲಿರುವ ಜೋರ್ಡಾನ್‌ ಎರಡನೇ ದೊರೆ ಅಬ್ದುಲ್ಲಾ ಜತೆ ಗುರುವಾರ ವೇದಿಕೆ ಹಂಚಿಕೊಂಡು ಮಾತನಾಡಿದ ಅವರು, ‘ಮುಸ್ಲಿಂ ಯುವಕರ ಒಂದು ಕೈಯಲ್ಲಿ ಪವಿತ್ರ ಕುರಾನ್ ಇರಬೇಕು, ಇನ್ನೊಂದು ಕೈಯಲ್ಲಿ ಕಂಪ್ಯೂಟರ್‌ ಇರಬೇಕು’ ಎಂದು ಸಂದೇಶ ನೀಡಿದರು.

‘ಭಯೋತ್ಪಾದನೆ ಮತ್ತು ಉಗ್ರವಾದ ವಿರುದ್ಧದ ಹೋರಾಟ ಯಾವುದೇ ನಿರ್ದಿಷ್ಟ ಧರ್ಮದ ವಿರುದ್ಧ ಅಲ್ಲ. ಬದಲಾಗಿ ಯುವಕರನ್ನು ದಾರಿ ತಪ್ಪಿಸಿ ಅಮಾಯಕ ಜನರಿಗೆ ಚಿತ್ರಹಿಂಸೆ ನೀಡುವಂತೆ ಪ್ರಚೋದನೆ ನೀಡುತ್ತಿರುವವರ ವಿರುದ್ಧವಾಗಿದೆ’ ಎಂದು ಪ್ರಧಾನಿ ಹೇಳಿದರು.

ADVERTISEMENT

‘ಧರ್ಮದ ಹೆಸರಿನಲ್ಲಿ ಮಾನವೀಯತೆ ಮೇಲೆ ದಾಳಿ ಮಾಡಿ ಹಿಂಸಾಚಾರ ನಡೆಸುವವರಿಗೆ ಅದೇ ಧರ್ಮಕ್ಕೆ ಹಾನಿ ಮಾಡುತ್ತಿದ್ದೇವೆ ಎನ್ನುವ ತಿಳಿವಳಿಕೆಯೇ ಇಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಭಾರತವು ಜಗತ್ತಿನ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲಾಗಿದೆ. ನಾವು ಯಾವುದೇ ಭಾಷೆಯನ್ನು ಮಾತನಾಡಬಹುದು ಅಥವಾ ಮಸೀದಿ, ದೇವಾಲಯ, ಚರ್ಚ್‌, ಗುರುದ್ವಾರದಲ್ಲಿ
ಪ್ರಾರ್ಥನೆ ಮಾಡಬಹುದು. ನಮ್ಮ ಪರಂಪರೆ ಮತ್ತು ಉದಾತ್ತ ಮೌಲ್ಯಗಳು ಹಾಗೂ ಧರ್ಮಗಳ ಸಂದೇಶಗಳು ನಮಗೆ ಶಕ್ತಿಯಾಗಿವೆ. ಇವುಗಳಿಂದಲೇ ಉಗ್ರವಾದವನ್ನು ಸೋಲಿಸಬಹುದು’ ಎಂದು ವಿಶ್ಲೇಷಿಸಿದರು.

ಇಸ್ಲಾಂ ಪರಂಪರೆ ಕುರಿತು ಮಾತನಾಡಿದ ದೊರೆ ಅಬ್ದುಲ್ಲಾ, ‘ಭಯೋತ್ಪಾದನೆ ವಿರುದ್ಧ ನಡೆಯುತ್ತಿರುವ ಜಾಗತಿಕ ಯುದ್ಧವು ಯಾವುದೇ ಧರ್ಮ ಅಥವಾ ಜನರ ಮೇಲೆ ಅಲ್ಲ. ಉಗ್ರವಾದ, ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ಎಲ್ಲ ಸಮುದಾಯಗಳು ಒಗ್ಗೂಡಿ ನಡೆಸುತ್ತಿರುವ ಹೋರಾಟವಾಗಿದೆ’ ಎಂದು ಹೇಳಿದರು.

‘ದ್ವೇಷ ಬಿತ್ತುವವರ ದನಿಯನ್ನು ಅಡಗಿಸಬೇಕಾಗಿದೆ. ಇಂಟರ್‌ನೆಟ್‌ನಲ್ಲೂ ಅದಕ್ಕೆ ನಿರ್ಬಂಧಿಸಬೇಕು’ ಎಂದು ಹೇಳಿದರು.

ಹನ್ನೆರಡು ಒಪ್ಪಂದಗಳಿಗೆ ಸಹಿ

ಭಾರತ ಮತ್ತು ಜೋರ್ಡಾನ್‌ 12 ಒಪ್ಪಂದಗಳಿಗೆ ಸಹಿ ಹಾಕಿವೆ.

ರಕ್ಷಣೆ, ಆರೋಗ್ಯ, ವೈದ್ಯಕೀಯ ಮತ್ತು ಜೋರ್ಡಾನ್‌ನಲ್ಲಿ ಉತ್ಕೃಷ್ಟ ಕೇಂದ್ರ ಸ್ಥಾಪಿಸುವುದು, ರಸಗೊಬ್ಬರ ಪೂರೈಸುವುದು, ಜೋರ್ಡಾನ್‌ ವಿಶ್ವವಿದ್ಯಾಲಯದಲ್ಲಿ ಹಿಂದಿ ಪೀಠ ಸ್ಥಾಪಿಸುವ ಕುರಿತು ಪ್ರಮುಖವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಭಯೋತ್ಪಾದನೆ ನಿಗ್ರಹ ಮತ್ತು ಸೈಬರ್‌ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲೂ ರಕ್ಷಣಾ ಸಹಕಾರವನ್ನು ಬಲಪಡಿಸಲು ಉಭಯ ರಾಷ್ಟ್ರಗಳು ಒಪ್ಪಿಗೆ ಸೂಚಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಜೋರ್ಡಾನ್‌ನ ಎರಡನೇ ದೊರೆ ಅಬ್ದುಲ್ಲಾ ನಡುವೆ ಗುರುವಾರ ನಡೆದ ಮಾತುಕತೆ ಸಂದರ್ಭದಲ್ಲಿ ಸಿರಿಯಾ ನಿರಾಶ್ರಿತರು ಮತ್ತು ಪ್ಯಾಲೆಸ್ಟೀನ್‌ ವಿಷಯ ಸೇರಿದಂತೆ ಹಲವು ಮಹತ್ವದ ವಿಷಯಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು ಎಂದು ವಿದೇಶಾಂಗ ಸಚಿವಾಲಯದ ಆರ್ಥಿಕ ಸಂಬಂಧಗಳ ವಿಭಾಗದ ಕಾರ್ಯದರ್ಶಿ ಟಿ.ಎಸ್‌. ತ್ರಿಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.