ಚೆನ್ನೈ(ಪಿಟಿಐ): ಕೂಡುಂಕುಳಂ ಪರಮಾಣು ಸ್ಥಾವರದ ಮೊದಲ ಘಟಕವು ವಿದ್ಯುತ್ ಉತ್ಪಾದಿಸಲು ಸಿದ್ಧವಾಗಿದ್ದು, ಈ ಘಟಕದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ವಿದ್ಯುತ್ತನ್ನು ರಾಜ್ಯಕ್ಕೆ ನೀಡಬೇಕು ಎಂದು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ ಕೂಡುಂಕುಳಂ ಸ್ಥಾವರದ ಮೊದಲ ಘಟಕವು ವಿದ್ಯುತ್ ಉತ್ಪಾದನೆಯನ್ನು ಆರಂಭಿಸುತ್ತದೆ ಎಂದು ತಿಳಿದು ಬಂದಿದ್ದು, ಮಾರ್ಚ್‌ನಲ್ಲಿ ಈ ಬಗ್ಗೆ ಪತ್ರ ಬರೆದು ತಮಿಳುನಾಡಿನ ವಿದ್ಯುತ್ ಅಗತ್ಯದ ಬಗ್ಗೆ ತಮ್ಮ ಗಮನ ಸೆಳೆಯಲಾಗಿದೆ ಎಂದು ಜಯಲಲಿತಾ ಅವರು ಪ್ರಧಾನಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
`ಮೊದಲಿನ ಪತ್ರಕ್ಕೆ ಇದುವರೆಗೆ ಉತ್ತರ ಬಾರದಿರುವುದರಿಂದ ಈ ಪತ್ರ ಬರೆಯಲಾಗಿದ್ದು, ಮೊದಲ ಘಟಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ನಮ್ಮ ರಾಜ್ಯಕ್ಕೇ ನೀಡಬೇಕು ಎಂದು ಮತ್ತೊಮ್ಮೆ ಕೋರುತ್ತಿದ್ದೇನೆ~ ಎಂದು ತಿಳಿಸಿದ್ದಾರೆ.
ನ್ಯಾಯಯುತವಾದ ಬೇಡಿಕೆಯನ್ನು ತಾವು ಈಡೇರಿಸುತ್ತೀರಿ ಎಂಬ ಭರವಸೆ ಇದೆ ಎಂದು ತಿಳಿಸಿರುವ ಜಯಲಲಿತಾ ಅವರು, ವಿದ್ಯುತ್ ವರ್ಗಾವಣೆ ಮಾರ್ಗದ ದಟ್ಟಣೆ ಮತ್ತು ರಾಜ್ಯದ ವಿದ್ಯುತ್ ಬೇಡಿಕೆ ಇವೆರಡನ್ನೂ ಗಮನದಲ್ಲಿ ಇಟ್ಟುಕೊಂಡು ಈ ಕೋರಿಕೆಯನ್ನು ಮನ್ನಿಸಬೇಕು ಎಂದು ಪ್ರಧಾನಿ ಅವರನ್ನು ಒತ್ತಾಯಿಸಿದ್ದಾರೆ.
ಸ್ಥಾವರದ ಮೊದಲ ಘಟಕದಲ್ಲಿ ಉತ್ಪಾದನೆಯಾಗಲಿರುವ ಎಲ್ಲಾ ವಿದ್ಯುತ್ತನ್ನು ತಮಿಳುನಾಡಿಗೇ ನೀಡಬೇಕು ಎಂದು ಆಗ್ರಹಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.