ADVERTISEMENT

ಕೂಡುಂಕುಳಂ: ಸ್ಥಾವರ ಕಾರ್ಯಾರಂಭಕ್ಕೆ ಬದ್ಧ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಚೆನ್ನೈ: ಸ್ಥಳೀಯರ ವಿರೋಧದ ನಡುವೆಯೂ ಕೂಡುಂಕುಳುಂ ಪರಮಾಣು ವಿದ್ಯುತ್ ಯೋಜನೆ (ಕೆಎನ್‌ಪಿಪಿ) ಕಾರ್ಯಾರಂಭಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಭಾರತೀಯ ಪರಮಾಣು ಶಕ್ತಿ ನಿಗಮ ಲಿಮಿಟೆಡ್  (ಎನ್‌ಪಿಸಿಐಎಲ್) ಸ್ಪಷ್ಟಪಡಿಸಿದೆ.

`ವಿಕಿರಣ ಮತ್ತು ಕ್ಯಾನ್ಸರ್~ ಕುರಿತು ಬುಧವಾರ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದ ಎನ್‌ಪಿಸಿಐಎಲ್ ಅಧಿಕಾರಿಗಳು, ಕೆಎನ್‌ಪಿಪಿಯ ಮೊದಲ ಘಟಕವು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾಗಲು ಮೂರ‌್ನಾಲ್ಕು ತಿಂಗಳು ಹಿಡಿಯುತ್ತದೆ ಎಂದು ಹೇಳಿದ್ದಾರೆ.

ರಷ್ಯ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೂಡುಂಕುಳುಂ ಮೊದಲ ಘಟಕಕ್ಕೆ ಸಂಬಂಧಿಸಿದಂತೆ ಅಗತ್ಯ ವಾದ ಎಲ್ಲಾ ಪರೀಕ್ಷೆಗಳನ್ನು ಕಳೆದ ಜುಲೈ ಮತ್ತು ಅಕ್ಟೋಬರ್ ಮಧ್ಯೆಯೇ ನಡೆಸಲಾಗಿದೆ. ಪರ್ಯಾಯ ಇಂಧನ ಬಳಸಿ ಘಟಕದ ಪೂರ್ವ ಪರೀಕ್ಷೆಯನ್ನೂ ನಡೆಸಲಾಗಿದೆ. ಈ ಘಟಕಕ್ಕೆ ರಷ್ಯದಿಂದ ಆಮದಾಗುವ ಸಂವರ್ಧಿತ ಯುರೇನಿಯಂ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪೂರ್ವ ಪರೀಕ್ಷೆಗಳು ನಡೆದ ಮೇಲೆ ಕೂಡುಂಕುಳುಂನಲ್ಲಿ ಕೆಲಸ- ಕಾರ್ಯಗಳು ಸ್ಥಗಿತವಾಯಿತು. ಈ ಘಟಕವು ಕಾರ್ಯಾರಂಭ ಆಗಲು ಅಣು ಶಕ್ತಿ ನಿಯಂತ್ರಣ ಪ್ರಾಧಿಕಾರದಿಂದ (ಎಇಆರ್‌ಬಿ) ಮತ್ತೆ ಹೊಸದಾಗಿ ಅನುಮತಿ ಪಡೆಯಬೇಕಿದೆ. ಈ ಅನುಮತಿ ಪಡೆದ ಮೇಲೆಷ್ಟೆ  ಸಂವರ್ಧಿತ ಯುರೇನಿಯಂ ಬಳಸಿ ಪರೀಕ್ಷೆ ನಡೆಸಲು ಸಾಧ್ಯ. ಈ ಪರೀಕ್ಷೆಗಳು ಯಶಸ್ವಿಯಾದ ಮೇಲೆ ವಿದ್ಯುತ್ ಉತ್ಪಾದನೆಗೆ ತೊಡಗಬಹುದು ಎಂದು ಎನ್‌ಪಿಸಿಐಎಲ್ ನಿರ್ದೇಶಕ (ತಾಂತ್ರಿಕ) ಭಾರದ್ವಾಜ್ ಹೇಳಿದ್ದಾರೆ.

ಈ ಯೋಜನೆಗೆ ಸ್ಥಳೀಯರ ವಿರೋಧ ಸಕಾರಣವಾಗಿರಬಹುದು, ಆದರೆ ಇವರ ಪ್ರತಿಭಟನೆಗೆ ಎನ್‌ಪಿಸಿಐಎಲ್, ಅಣು ಶಕ್ತಿ ಇಲಾಖೆ (ಡಿಎಇ) ಮತ್ತು ಕೇಂದ್ರ ಸರ್ಕಾರ ಹೆದರುವುದಿಲ್ಲ. ಸ್ಥಳೀಯರ ಎಲ್ಲಾ ಆತಂಕಗಳನ್ನು ದೂರ ಮಾಡಿ, ವಿವಾದವನ್ನು ಸೌಹಾರ್ದದಿಂದ ಬಗೆಹರಿಸಲಾಗುವುದು ಎಂದು ತಿಳಿಸಿದ್ದಾರೆ.

ಎನ್‌ಪಿಸಿಐಎಲ್ ದೇಶದಾದ್ಯಂತ ಇರುವ ತನ್ನ ನೌಕರರ ಆರೋಗ್ಯದ ಸ್ಥಿತಿಗತಿ ಕುರಿತ ಸಮಗ್ರ ಮಾಹಿತಿಯನ್ನೂ ಎನ್‌ಪಿಸಿಐಎಲ್ ಈ ಸಭೆಯಲ್ಲಿ ಬಿಡುಗಡೆ ಮಾಡಿದೆ.

31 ರಂದು ಮಾತುಕತೆ
ಕೂಡುಂಕುಳುಂ ಯೋಜನೆ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಚಿಸಿರುವ ತಜ್ಞರ ಸಮಿತಿ ಮತ್ತು ತಮಿಳುನಾಡು ಸರ್ಕಾರದ ತಂಡದ ನಡುವಿನ ನಾಲ್ಕನೇ ಸುತ್ತಿನ ಮಾತುಕತೆಯನ್ನು ಜನವರಿ 30ರಂದು ನಡೆಸಲು ಚಿಂತನೆ ನಡೆದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.