ADVERTISEMENT

ಕೃಷ್ಣಾ ಐತೀರ್ಪು: ವಿಶೇಷ ಮೇಲ್ಮನವಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2014, 19:30 IST
Last Updated 9 ಜನವರಿ 2014, 19:30 IST

ನವದೆಹಲಿ: ಕೃಷ್ಣಾ ನದಿ ವಿವಾದ ಕುರಿತು ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ನೀಡಿರುವ ಐತೀರ್ಪಿನ ಕೆಲವು ಅಂಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ವಕೀಲರ ತಂಡ ಮುಕ್ತ ಮನಸು ಹೊಂದಿದ್ದು, ಎಲ್ಲ ಸಾಧಕ– ಬಾಧಕಗಳನ್ನು ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದೆ.

ಕೃಷ್ಣಾ ಐತೀರ್ಪು ಕುರಿತು ಕೆಲವು ಸ್ಪಷ್ಟನೆ ಕೇಳಿ ಸಲ್ಲಿಸಲಾಗಿದ್ದ ಅರ್ಜಿಗಳ ಸಂಬಂಧ ನ್ಯಾಯಮಂಡಳಿ ನವೆಂಬರ್‌ 29 ರಂದು ವಿಸ್ತೃತವಾದ ತೀರ್ಪು ಕೊಟ್ಟಿದೆ. ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕೆಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಹಿರಿಯ ವಕೀಲ ನಾರಿಮನ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದರು, ನ್ಯಾ.ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯ­ಮಂಡಳಿ ನೀಡಿರುವ ತೀರ್ಪಿನಲ್ಲಿ ರಾಜ್ಯಕ್ಕೆ ಅನು­ಕೂವಾಗುವ ಅನೇಕ ಅಂಶಗಳಿವೆ. ಎಲ್ಲೋ ಕೆಲವು ಕಡೆ ಸ್ವಲ್ಪ ಹಿನ್ನಡೆ ಆಗಿರಬಹುದು. ಎಲ್ಲಿ ಅನು­ಕೂಲವಾಗಿದೆ. ಎಲ್ಲಿ ಅನಾನುಕೂಲ ಆಗಿದೆ ನೋಡಿ­ಕೊಂಡು ಅನಂತರ ಅಂತಿಮ ತೀರ್ಮಾನ ಮಾಡೋಣ ಎಂದು ನಾರಿಮನ್‌ ಮುಖ್ಯಮಂತ್ರಿ­ಗಳಿಗೆ ಹೇಳಿದ್ದಾರೆಂದು ಮೂಲಗಳು ತಿಳಿಸಿವೆ.

ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಹೆಚ್ಚಿಸಲು ಅನುಮತಿ ನೀಡಿರುವ ಅಂಶ ರಾಜ್ಯಕ್ಕೆ ಬಹು ದೊಡ್ಡ ಲಾಭವಾಗಲಿದೆ ಎಂದು ನಾರಿಮನ್‌ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆಂದು ಮೂಲಗಳು ವಿವರಿಸಿವೆ.
ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಸಾಕಷ್ಟು ಸಮಯಾವಕಾಶವಿದೆ. ದುಡುಕಿನ ಹೆಜ್ಜೆಗಳನ್ನು ಇಡುವುದು ಬೇಡ. ಬೇರೆ ರಾಜ್ಯಗಳು ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಿ ಮುಂದಿನ ನಿರ್ಧಾರ ಮಾಡೋಣ ಎಂದು ನಾರಿಮನ್‌ ಸಲಹೆ ನೀಡಿದ್ದಾರೆ.

ನಾರಿಮನ್‌ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿಗಳ ಜತೆ ನೀರಾವರಿ ಸಚಿವ ಎಂ.ಬಿ. ಪಾಟೀಲ, ಕಾನೂನು ಸಚಿವ ಟಿ.ಬಿ. ಜಯಚಂದ್ರ, ಗ್ರಾಮೀಣಾಭಿವೃದ್ಧಿ ಸಚಿವ ಎಚ್‌.ಕೆ. ಪಾಟೀಲ, ಯೋಜನಾ ಸಚಿವ ಎಸ್‌.ಆರ್‌. ಪಾಟೀಲ.

ಅಡ್ವೊಕೇಟ್‌ ಜನರಲ್‌ ರವಿವರ್ಮ ಕುಮಾರ್ ಮುಂತಾದವರಿದ್ದರು. ಕೃಷ್ಣಾ ನದಿ ವಿವಾದದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರ ತಂಡದ ಸದಸ್ಯರಾದ ಜವಳಿ, ಮೋಹನ್‌ ಕಾತರಕಿ, ಬ್ರಿಜೇಶ್ ಕಾಳಪ್ಪ ಅವರಿದ್ದರು.
ನಮ್ಮ ಎಲ್ಲ ಆತಂಕಗಳನ್ನು ನಾರಿಮನ್ ಅವರಿಗೆ ವಿವರಿಸಲಾಗಿದೆ. ಎಲ್ಲ ಸಂಗತಿಗಳನ್ನು ಆಲಿಸಿದ್ದಾರೆ. ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಒಂದು ವಾರದಲ್ಲಿ ತಮ್ಮ ನಿಲುವು ತಿಳಿಸಲಿದ್ದಾರೆಂದು ಸಿದ್ದರಾಮಯ್ಯ ಬಳಿಕ ಪತ್ರಕರ್ತರಿಗೆ ತಿಳಿಸಿದರು.

ಮುಖ್ಯಮಂತ್ರಿ, ನಾರಿಮನ್‌ ಅವರನ್ನು ಭೇಟಿ ಮಾಡುವ ಮೊದಲು ಕರ್ನಾಟಕ ಭವನದಲ್ಲಿ ಕಾನೂನು ಹಾಗೂ ನೀರಾವರಿ ತಜ್ಞರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು.

ದಿಢೀರ್‌ ಬೆಳವಣಿಗೆ ಅಲ್ಲ: ಸಚಿವ ಸಂಪುಟಕ್ಕೆ ಡಿ.ಕೆ. ಶಿವಕುಮಾರ್‌, ರೋಷನ್‌ ಬೇಗ್‌ ಅವರನ್ನು ಸೇರಿಸಿಕೊಂಡಿದ್ದು ದಿಢೀರ್‌ ಬೆಳವಣಿಗೆ ಅಲ್ಲ. ಪಕ್ಷದ ಹೈಕಮಾಂಡ್‌ ಜತೆ ಸುದೀರ್ಘವಾಗಿ ಚರ್ಚಿಸಿದ ಬಳಿಕವೇ ಕೈಗೊಂಡಿರುವ ತೀರ್ಮಾನ ಎಂದು ಸಿದ್ದರಾಮಯ್ಯ ಸಂಪುಟ ವಿಸ್ತರಣೆಯನ್ನು ಬಲವಾಗಿ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.