ADVERTISEMENT

ಕೆಪಿಎಸ್‌ಸಿಗೆ ಮತ್ತೆ ‘ಶಿಕ್ಷೆ’

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:16 IST
Last Updated 11 ಏಪ್ರಿಲ್ 2018, 20:16 IST
ಕೆಪಿಎಸ್‌ಸಿಗೆ ಮತ್ತೆ ‘ಶಿಕ್ಷೆ’
ಕೆಪಿಎಸ್‌ಸಿಗೆ ಮತ್ತೆ ‘ಶಿಕ್ಷೆ’   

ನವದೆಹಲಿ: ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ವು 1998, 1999 ಮತ್ತು 2004ರಲ್ಲಿ ಆಯೋಜಿಸಿದ್ದ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಅಸಂವಿಧಾನಿಕ’ ಎಂದು ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

ಇದರಿಂದಾಗಿ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಹುದ್ದೆಗಳ ಕನಿಷ್ಠ 28 ಜನ ಅಧಿಕಾರಿಗಳು ಹುದ್ದೆ ಕಳೆದುಕೊಳ್ಳಲಿದ್ದಾರೆ. ಅಲ್ಲದೆ, ಸುಮಾರು 70 ಮಂದಿ ಗ್ರೂಪ್ ‘ಬಿ’ ಯಿಂದ ಗ್ರೂಪ್ ‘ಎ’ ಗೆ ಬಡ್ತಿ ಪಡೆಯಲಿದ್ದು, ಅಂದಾಜು 70 ಅಧಿಕಾರಿಗಳು ಗ್ರೂಪ್ ‘ಎ’ಯಿಂದ ಗ್ರೂಪ್ ‘ಬಿ’ ಹುದ್ದೆಗೆ ಹಿಂಬಡ್ತಿ ಪಡೆಯ
ಲಿದ್ದಾರೆ. ನೇಮಕಗೊಂಡ ಅಭ್ಯರ್ಥಿಗಳ ಸೇವಾ ಹಿರಿತನದಲ್ಲೂ ಬದಲಾವಣೆ ಆಗಲಿದೆ.

2016ರ ಜೂನ್‌ 21ರಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ನ್ಯಾಯಮೂರ್ತಿಗಳಾದ ಆದರ್ಶಕುಮಾರ್‌ ಗೋಯಲ್ ಹಾಗೂ ಆರ್‌.ಎಫ್‌. ನಾರಿಮನ್‌ ಅವರಿದ್ದ ಪೀಠ, ‘ಹೈಕೋರ್ಟ್ ತೀರ್ಪಿನ ಬಗ್ಗೆ ನಮಗೆ ತೃಪ್ತಿ ಇದೆ. ನೇಮಕಾತಿ ಪ್ರಕ್ರಿಯೆ ಶುದ್ಧವಾಗಿರಬೇಕು. ಯಾವುದೇ ರೀತಿಯ ಅಕ್ರಮವನ್ನು ನಾವು ಸಹಿಸುವುದಿಲ್ಲ’ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.

ADVERTISEMENT

ಇದರಿಂದಾಗಿ ಆಯಾ ವರ್ಷ ನಡೆದಿರುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೆಪಿಎಸ್‌ಸಿಯು ಪರಿಷ್ಕೃತ ಪಟ್ಟಿ ಸಿದ್ಧಪಡಿಸುವುದು ಅನಿವಾರ್ಯವಾಗಿದೆ.

ಅರ್ಜಿದಾರರ ಪರ ವಕೀಲರಾದ ಆರ್‌.ವೆಂಕಟರಮಣಿ, ಗುರು ಕೃಷ್ಣಕುಮಾರ್‌, ಕಾಲಿನ್‌ ಗೊನ್ಸಾಲ್ವೀಸ್‌ ಹಾಗೂ ಕೆಪಿಎಸ್‌ಸಿ ಪರ ವಕೀಲರು, ಹೈಕೋರ್ಟ್ ತೀರ್ಪಿನ ಪರಿಶೀಲನೆಗೆ ಕೋರಿದರಲ್ಲದೆ, ನೇಮಕಾತಿ ಪಟ್ಟಿಯನ್ನು ಪರಿಷ್ಕರಿಸಿದಲ್ಲಿ ಯಾವುದೇ ಅಕ್ರಮದಲ್ಲಿ ಭಾಗಿಯಾಗದೆ ನೇಮಕಗೊಂಡ ಅಭ್ಯರ್ಥಿಗಳಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ವಾದಿಸಿದರು. ಈ ವಾದವನ್ನು ವಿರೋಧಿಸಿದ ವಕೀಲ ಕಿರಣ್‌ ಸೂರಿ, ನೇಮಕಾತಿ ಪ್ರಕ್ರಿಯೆಯಲ್ಲಿ ಭಾರಿ ಅಕ್ರಮ ನಡೆದಿರುವುದರಿಂದಲೇ ಕೆ.ಕೆ. ಮಿಶ್ರಾ ಸಮಿತಿಯು ಸಿಐಡಿ ತನಿಖೆಗೆ ಸೂಚಿಸಿತ್ತು ಎಂದು ಹೇಳಿದರು.

‘ನಾವು ಕಳಂಕಿತರನ್ನು ದೂರವಿಡುವ ಪ್ರಯತ್ನ ಮಾಡಿದ್ದೇವೆ. ಪರಿಷ್ಕೃತ ಪಟ್ಟಿಯನ್ನೂ ಸಿದ್ಧಪಡಿಸಿದ್ದೇವೆ’ ಎಂದು ಕೆಪಿಎಸ್‌ಸಿ ಪರ ವಕೀಲರು ಇದೇ ವೇಳೆ ಸಮರ್ಥಿಸಿಕೊಂಡರು.

ಹೈಕೋರ್ಟ್ ನೀಡಿರುವ ಆದೇಶದಿಂದಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಹುದ್ದೆಗಳ ಪ್ರತ್ಯೇಕ ಪಟ್ಟಿ ಸಿದ್ಧಪಡಿಸಬೇಕಿದೆ ಎಂದು ರಾಜ್ಯ ಸರ್ಕಾರದ ಪರ ವಕೀಲ ಬಸವಪ್ರಭು ಪಾಟೀಲ ತಿಳಿಸಿದರು.

‘ಯಾರು ಎಷ್ಟೇ ದೊಡ್ಡ ಹುದ್ದೆ ಪಡೆದಿರಲಿ. ಎಷ್ಟೇ ಉನ್ನತ ಸ್ಥಾನದಲ್ಲಿ ಇರಲಿ. ವಾಮಮಾರ್ಗದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರೆ ಕಾನೂನಿನ ಬಿಗಿಹಿಡಿತದಿಂದ ತಪ್ಪಿಸಿಕೊಳ್ಳುವ ಸಾಧ್ಯವೇ ಇಲ್ಲ’ ಎಂದು ನ್ಯಾಯಮೂರ್ತಿ ಗೋಯಲ್‌ ಅಭಿಪ್ರಾಯಪಟ್ಟರು.

ಇದೇ ಮಾದರಿಯ ಪ್ರತ್ಯೇಕ ಪ್ರಕರಣವೊಂದರ ವಿಚಾರಣೆ ನಡೆಸಿದ್ದ ಪೀಠ, 2011ನೇ ಸಾಲಿನ ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕಕ್ಕೆ ಕೆಪಿಎಸ್‌ಸಿ ನಡೆಸಿದ್ದ ಮುಖ್ಯ ಲಿಖಿತ ಪರೀಕ್ಷೆಯ ಅಕ್ರಮದ ಕುರಿತು ಪರಿಶೀಲಿಸುವಂತೆ ವಾರದ ಹಿಂದಷ್ಟೇ ರಾಜ್ಯ ಹೈಕೋರ್ಟ್‌ಗೆ ಸೂಚಿಸಿತ್ತು.

ಕೆಪಿಎಸ್‌ಸಿಯು 1998ರಲ್ಲಿ 383, 1999ರಲ್ಲಿ 192 ಹಾಗೂ 2004ರಲ್ಲಿ 153 ಗ್ರೂಪ್‌ ‘ಎ’ ಮತ್ತು ಗ್ರೂಪ್‌ ‘ಬಿ’ ಗೆಜೆಟೆಡ್‌ ಪ್ರೊಬೆಷನರಿ ಹುದ್ದೆಗಳ ನೇಮಕ ಪ್ರಕ್ರಿಯೆ ನಡೆಸಿತ್ತು. ಆದರೆ, ಈ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ದೂರಿ ಕೆ.ಆರ್‌. ಖಲೀಲ್‌ ಅಹಮದ್‌ ಹಾಗೂ ಇತರ ಅಭ್ಯರ್ಥಿಗಳು 2008ರಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿತ್ತು.

ಈ ಹುದ್ದೆಗಳ ಆಯ್ಕೆಗಾಗಿ ಲಿಖಿತ ಪರೀಕ್ಷೆ ನಡೆಸಿದ ನಂತರ ಆಯೋಜಿಸಲಾಗಿದ್ದ ಸಂದರ್ಶನಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಸ್ವಜನ ಪಕ್ಷಪಾತ, ಸಂದರ್ಶನದ ವೇಳೆ ನೀಡಲಾದ ಅಂಕಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದ ಕಾರಣದಿಂದಾಗಿ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಆದರೂ ಸಂಪೂರ್ಣ ನೇಮಕಾತಿ ಪಟ್ಟಿಯನ್ನೇ ರದ್ದುಪಡಿಸುವುದು ಅಸಾಧ್ಯ. ಕಳಂಕಿತ, ಅನರ್ಹ ಅಭ್ಯರ್ಥಿಗಳನ್ನು ಬೇರ್ಪಡಿಸಬಹುದಾಗಿದ್ದು, ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಹೈಕೋರ್ಟ್ ಸೂಚಿಸಿತ್ತು.

‘ಈ ಮೂರೂ ನೇಮಕಾತಿ ಪ್ರಕ್ರಿಯೆಗಳಲ್ಲಿ ನೇಮಕಗೊಂಡಿದ್ದ ಅಭ್ಯರ್ಥಿಗಳಲ್ಲಿ ನಿಯಮ ಉಲ್ಲಂಘಿಸಿ, ಅಕ್ರಮವಾಗಿ ನೇಮಕಗೊಂಡವರು ಯಾರು ಎಂಬ ಪಟ್ಟಿಯನ್ನು ಸಿದ್ಧಪಡಿಸಬೇಕು. ಅಲ್ಲದೆ, ಕೆಪಿಎಸ್‌ಸಿಯು ನಿಯಮ ಉಲ್ಲಂಘಿಸಿ 1:5 ಅನುಪಾತದ ಬದಲು 1:10 ಹಾಗೂ 1:15 ಅನುಪಾತದಲ್ಲಿ ಅಭ್ಯರ್ಥಿಗಳಿಗೆ ಸಂದರ್ಶನದ ಆಹ್ವಾನ ನೀಡಿದ್ದು, ಅನರ್ಹರೂ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿಕೊಂಡು, ಉತ್ತಮ ಅಂಕ ಗಳಿಸಿ ನೇಮಕಗೊಂಡಿದ್ದರು’ ಎಂದು ಹೈಕೋರ್ಟ್‌ ತಿಳಿಸಿತ್ತು.

ಸುದೀರ್ಘ ಅವಧಿಯ ಹೋರಾಟದಲ್ಲಿ ಜಯ ಸಿಕ್ಕಿದೆ. ತೀರ್ಪು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮತ್ತು ಕೆಪಿಎಸ್‌ಸಿ ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಖಲೀಲ್‌ ಅಹ್ಮದ್‌ ಕೆಎಎಸ್‌
-ಅಭ್ಯರ್ಥಿಗಳ ಪರ ಹೋರಾಟಗಾರ

7 ಐಎಎಸ್‌ ಅಧಿಕಾರಿಗಳಿಗೆ ಹಿಂಬಡ್ತಿ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 1998, 1999 ಮತ್ತು 2004ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರಿ ಅಧಿಕಾರಿಗಳ ಆಯ್ಕೆ ಪಟ್ಟಿಯನ್ನು ಪರಿಷ್ಕರಿಸುವಂತೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದ ಪರಿಣಾಮ, ಕೆಎಎಸ್‌ನಿಂದ ಐಎ
ಎಸ್‌ಗೆ ಬಡ್ತಿ ಪಡೆದಿದ್ದ ಏಳು ಅಧಿಕಾರಿಗಳಿಗೆ ಹಿಂಬಡ್ತಿಯ ಆತಂಕ ಎದುರಾಗಿದೆ.

ಕರ್ನಾಟಕ ಆಡಳಿತ ಸೇವೆಯ (ಕೆಎಎಸ್‌) 34 ಅಧಿಕಾರಿಗಳಿಗೆ ಭಾರತೀಯ ಆಡಳಿತ ಸೇವೆಗೆ (ಐಎಎಸ್‌) ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಇತ್ತೀಚೆಗೆ ಬಡ್ತಿ ನೀಡಿತ್ತು.

ಹಿಂಬಡ್ತಿ ಆತಂಕ ಎದುರಿಸುತ್ತಿರುವವರು: ಸರ್ಕಾರದ ಉಪ ಕಾರ್ಯದರ್ಶಿ (ವಾಣಿಜ್ಯ ಮತ್ತು ಕೈಗಾರಿಕೆ) ಎಚ್‌. ಬಸವ ರಾಜೇಂದ್ರ, ನಗರಾಭಿವೃದ್ಧಿ ಸಚಿವ ರೋಷನ್‌ ಬೇಗ್‌ ಅವರ ಆಪ್ತ ಕಾರ್ಯದರ್ಶಿ ಎಚ್‌.ಎನ್‌. ಗೋಪಾಲಕೃಷ್ಣ, ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖ್ಯ ಆಡಳಿತಾಧಿಕಾರಿ ಮತ್ತು ನಿರ್ದೇಶಕರಾಗಿರುವ ಪಿ. ವಸಂತಕುಮಾರ್‌, ಉಡುಪಿ ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಸಿ, ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ಕವಿತಾ ಮಣ್ಣಿಕೇರಿ, ಬಿಬಿಎಂಪಿ ಉಪ ಆಯುಕ್ತ (ಆಡಳಿತ) ಜಿ.ಸಿ. ವೃಷಭೇಂದ್ರ ಮೂರ್ತಿ, ಹಂಪಿ ವಿಶ್ವ ಪರಂಪರೆ ಅಭಿವೃದ್ಧಿ ಪ್ರಾಧಿಕಾರ (ಹೊಸಪೇಟೆ) ಆಯುಕ್ತ ಕರೀಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.