ADVERTISEMENT

ಕೆಲದಿನಗಳಲ್ಲಿ ಪೆಟ್ರೋಲ್, ಡೀಸೆಲ್ ದರ ₹3–4ರಷ್ಟು ಹೆಚ್ಚಾಗುವ ಸಾಧ್ಯತೆ

ಏಜೆನ್ಸೀಸ್
Published 21 ಮೇ 2018, 14:34 IST
Last Updated 21 ಮೇ 2018, 14:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಮುಂದಿನ ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ₹3ರಿಂದ 4ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಿರಲಿಲ್ಲ. ಈ ಅವಧಿಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ಕಚ್ಚಾ ತೈಲದ ದರ 69.30 ಅಮೆರಿಕನ್ ಡಾಲರ್‌ನಿಂದ (₹4,717.70) 88.91 ಡಾಲರ್‌ಗೆ (₹6,052.68) ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 66.62ರಿಂದ 67.06ಕ್ಕೆ ತಲುಪಿದೆ. ಈ ಎಲ್ಲ ಅಂಶಗಳ ಪರಿಣಾಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಕಾರಣವಾಗಲಿವೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.

ಮತ್ತೊಂದೆಡೆ, ‘ಬ್ರೆಂಟ್‌ ತೈಲ’ದ ಸೋಮವಾರ 36 ಸೆಂಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 78.87 ಡಾಲರ್‌ಗಳಷ್ಟಾಗಿದೆ.  ಅಮೆರಿಕದ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೇಟ್‌ (ಡಬ್ಲ್ಯುಟಿಐ) ಕಚ್ಚಾ ತೈಲ ದರ 40 ಸೆಂಟ್‌ಗಳಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್‌ಗೆ 71.68 ಡಾಲರ್‌ಗಳಿಗೆ ತಲುಪಿದೆ.

ADVERTISEMENT

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆ ಪರಿಣಾಮವಾಗಿ ಕಳೆದ ಒಂದು ವಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕ್ರಮವಾಗಿ ₹1.61 ಮತ್ತು ₹1.64ರಷ್ಟು ಹೆಚ್ಚಾಗಿದೆ. ಜತೆಗೆ, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಜಿಗಿದಿವೆ. ಭಾನುವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ದರಗಳು ಪ್ರತಿ ಲೀಟರಿಗೆ ಕ್ರಮವಾಗಿ ₹77.48 ಮತ್ತು ₹68.73ಕ್ಕೆ ಏರಿಕೆ ಕಂಡಿವೆ.

ಶೀಘ್ರವೇ ಕ್ರಮ: ಪ್ರಧಾನ್‌

‘ಇಂಧನ ದರ ಏರಿಕೆಯಾಗುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ವಿವಿಧ ಪರ್ಯಾಯಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಬೆಲೆ ಏರಿಕೆಗೆ ಕಡಿವಾಣ ಹಾಕಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು’ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇಂಧನ ಸುಂಕ ಕಡಿತಕ್ಕೆ ಒತ್ತಾಯ
ತೈಲ ಬೆಲೆ ಏರಿಕೆ ದೇಶದ ಆರ್ಥಿಕ ಪ್ರಗತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹೀಗಾಗಿ ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ತಕ್ಷಣವೇ ಕಡಿತ ಮಾಡುವಂತೆ ಉದ್ಯಮವಲಯ ಸರ್ಕಾರವನ್ನು ಒತ್ತಾಯಿಸಿದೆ.

ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಬೇಡಿಕೆ ಸಲ್ಲಿಸಿವೆ. ಹೀಗೆ ಮಾಡುವುದರಿಂದ ಇಂಧನಗಳ ದರ ಏರಿಕೆ ಸಮಸ್ಯೆಗೆ ದೀರ್ಘಾವಧಿಯ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟಿವೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.