ADVERTISEMENT

ಕೆಲಸ ಮಾಡಿ, ಗಂಟನ್ನೂ ಮಾಡಿಕೊಳ್ಳಿ...

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2012, 19:30 IST
Last Updated 10 ಆಗಸ್ಟ್ 2012, 19:30 IST

ಲಖನೌ: ಭ್ರಷ್ಟಾಚಾರದ ವಿರುದ್ಧ ಜೋರಾಗಿ ಆಂದೋಲನಗಳು ನಡೆಯುತ್ತಿರುವ ಹೊತ್ತಿನಲ್ಲೇ ಉತ್ತರ ಪ್ರದೇಶದ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ತಮ್ಮ ಇಲಾಖೆಯ ಅಧಿಕಾರಿಗಳಿಗೆ `ಹೆಚ್ಚು ಕೆಲಸ ಮಾಡಿ, ಸ್ವಲ್ಪ ಗಂಟನ್ನೂ ಮಾಡಿಕೊಳ್ಳಿ~ ಎಂಬ `ಕಿವಿಮಾತು~ ಹೇಳಿದ್ದಾರೆ ಎನ್ನಲಾಗಿದೆ.

ಇಟಾ ಜಿಲ್ಲೆಯಲ್ಲಿ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೋದರರೂ ಆದ ಸಚಿವ ಶಿವಪಾಲ್ ಸಿಂಗ್ ಯಾದವ್‌ಈ `ಹಿತೋಪದೇಶ~ ಮಾಡಿದ್ದಾರೆ ಎಂದು ವರದಿಯಾಗಿದೆ

ಶಿವಪಾಲ್ ಅವರ ಈ ಮಾತುಗಳು ಸ್ಥಳೀಯ ವಾಹಿನಿಗಳಲ್ಲಿ ವರದಿಯಾಗಿದ್ದು, ಈ ಬಗ್ಗೆ ಪ್ರತಿಪಕ್ಷಗಳು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿವೆ.

ಸಚಿವರು ಅಧಿಕಾರಿಗಳೊಂದಿಗೆ ಮಾಧ್ಯಮಗಳ ಪ್ರವೇಶಕ್ಕೆ ಅವಕಾಶವಿರದ ಸಭೆ ನಡೆಸಿದರು. ಈ ಸಭೆಯನ್ನು ಚಿತ್ರೀಕರಿಸಲು ಅಧಿಕಾರಿಗಳು ಸ್ಥಳೀಯ ವಾಹಿನಿಯೊಂದರ ಸಿಬ್ಬಂದಿಯನ್ನು ಕರೆಸಿದ್ದರು. ಈ ಮೂಲಕ ಸಚಿವರು ಅಧಿಕಾರಿಗಳಿಗೆ ನೀಡಿದ ಬೋಧನೆ ಬಿತ್ತರಗೊಂಡಿದೆ ಎನ್ನಲಾಗಿದೆ.

ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾದ ತಮ್ಮ ವಿವಾದಾತ್ಮಕ ಹೇಳಿಕೆ ಕುರಿತಂತೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿರುವ ಶಿವಪಾಲ್ ಸಿಂಗ್ ಯಾದವ್, ತಾವು ಆ ರೀತಿ ಹೇಳಿಯೇ ಇಲ್ಲ ಎಂದಿದ್ದಾರೆ.

`ಲೋಕೋಪಯೋಗಿ ಸಚಿವರ ಈ ನುಡಿಗಳು ಸಮಾಜವಾದಿ ಪಕ್ಷದ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ~ ಎಂದು ಬಿಎಸ್‌ಪಿ ಹಿರಿಯ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಕಟುವಾಗಿ ಟೀಕಿಸಿದ್ದಾರೆ.

`ಇಂತಹ ಮಾತಗಳನ್ನಾಡಲು ನಾಚಿಕೆ ಆಗಬೇಕು. ಇದರಿಂದ ಸರ್ಕಾರಿ ನೌಕರರಿಗೆ ಲಂಚ ತೆಗೆದುಕೊಳ್ಳಲು ಮುಕ್ತ ಅವಕಾಶ ನೀಡಿದಂತಾಗಿದೆ~ ಎಂದು ಬಿಜೆಪಿಯ ಲಾಲ್‌ಜಿ ಟಂಡನ್ ಹೇಳಿದ್ದಾರೆ.

`ಸಚಿವರೊಬ್ಬರು ಇಂತಹ ಇಂತಹ ಮಾತನ್ನಾಡಿರುವುದು ದುರದೃಷ್ಟಕರ~ ಎಂದು  ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ರೀಟಾ ಬಹುಗುಣ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.