ADVERTISEMENT

ಕೇಂದ್ರದ ನಿಯಮ ವಿರೋಧಿಸಿ ಮೇಘಾಲಯದಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ಪಕ್ಷ ತ್ಯಾಗ

ಐಎಎನ್ಎಸ್
Published 6 ಜೂನ್ 2017, 7:45 IST
Last Updated 6 ಜೂನ್ 2017, 7:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುರಾ: ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿದ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಮೇಘಾಲಯದ ಮತ್ತೊಬ್ಬ ಬಿಜೆಪಿ ನಾಯಕ, ಬಚು ಮರಕ್‌ ಪಕ್ಷ ತ್ಯಜಿಸಿದ್ದಾರೆ. ಇದರೊಂದಿಗೆ, ನಿಯಮ ವಿರೋಧಿಸಿ ಪಕ್ಷದ ಇಬ್ಬರು ನಾಯಕರು ರಾಜೀನಾಮೆ ನೀಡಿದಂತಾಗಿದೆ.

ಬಚು ಮರಕ್ ಅವರು ನಾರ್ತ್ ಗರೋ ಹಿಲ್ಸ್‌ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ವೆಸ್ಟ್ ಗರೋ ಹಿಲ್ಸ್‌ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬರ್ನಾರ್ಡ್ ಮರಕ್ ಅವರು ಈಗಾಗಲೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಪಕ್ಷದ ನಾಯಕರು ದೇಶದ ಜನರ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಗೌರವಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

‘ಜವಾಬ್ದಾರಿಯುತ ನಾಯಕನಾಗಿ, ಜಾತ್ಯತೀತವಲ್ಲದ ಸಿದ್ಧಾಂತವನ್ನು ನಮ್ಮ ಮೇಲೆ ಅವರು (ಬಿಜೆಪಿ ನಾಯಕರನ್ನು) ಹೇರುತ್ತಿರುವ ಬಗ್ಗೆ ಜನರ ಹಾದಿ ತಪ್ಪಿಸುವುದು ಇಷ್ಟವಿಲ್ಲ. ಅವರು ನಮ್ಮ ಮೇಲೆ  ಗೋಮಾಂಸ ನಿಷೇಧ ಹೇರಲಾಗದು’ ಎಂದು ರಾಜೀನಾಮೆ ನೀಡಿದ ಬಳಿಕ ಬಚು ಮರಕ್‌ ಹೇಳಿದ್ದಾರೆ.

ADVERTISEMENT

‘ಗೋಮಾಂಸ ನಮ್ಮ ಸಾಂಪ್ರದಾಯಿಕ ಆಹಾರಪದ್ಧತಿಯಾಗಿದ್ದು ಅದನ್ನು ಸರ್ಕಾರ ತಡೆಯಲಾಗದು. ತಡೆದಲ್ಲಿ ಆಡಳಿತಪಕ್ಷವು ವಿಶ್ವಾಸಾರ್ಹತೆ ಕಳೆದುಕೊಳ್ಳಬೇಕಾದೀತು’ ಎಂದು ಅವರು ಹೇಳಿದ್ದಾರೆ.

ಈ ಮಧ್ಯೆ, ಮರಕ್‌ ಅವರು ಇಂಥ ಹೇಳಿಕೆಗಳನ್ನು ನೀಡುವ ಮೂಲಕ ಜನರ ಹಾದಿತಪ್ಪಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಶಿಬುನ್ ಲಿಂಗ್ಡಾ ಆರೋಪಿಸಿದ್ದಾರೆ.

ಹತ್ಯೆಗಾಗಿ ಜಾನುವಾರು ಮಾರಾಟ ನಿಷೇಧಿಸಿರುವುದಕ್ಕೆ ಆರಂಭದಲ್ಲೇ ಮೇಘಾಲಯದ ಹಲವು ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ಸಾಮೂಹಿಕ ರಾಜೀನಾಮೆ ಬೆದರಿಕೆಯನ್ನೂ ಒಡ್ಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.