ADVERTISEMENT

ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧ ವಾರಂಟ್ ಜಾರಿ

ಪಿಟಿಐ
Published 25 ಮೇ 2018, 19:30 IST
Last Updated 25 ಮೇ 2018, 19:30 IST
ಸ್ವಾಮಿ ಚಿನ್ಮಯಾನಂದ
ಸ್ವಾಮಿ ಚಿನ್ಮಯಾನಂದ   

ಷಹಜಹಾನ್‌ಪುರ: ಕೇಂದ್ರದ ಮಾಜಿ ಸಚಿವ ಸ್ವಾಮಿ ಚಿನ್ಮಯಾನಂದ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಹಿಂಪಡೆಯಬೇಕು ಎಂದು ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಸ್ಥಳೀಯ ನ್ಯಾಯಾಲಯ, ಸ್ವಾಮೀಜಿ ವಿರುದ್ಧ ಜಾಮೀನುಸಹಿತ ವಾರಂಟ್‌ ಜಾರಿ ಮಾಡಿದೆ.

ಸಂತ್ರಸ್ತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ಜಿಲ್ಲಾ ಮುಖ್ಯ ನ್ಯಾಯಾಧೀಶರಾದ ಶಿಖಾ ಪ್ರಧಾನ್‌, ₹5000 ಮೊತ್ತದ ವಾರಂಟ್‌ ಜಾರಿ ಮಾಡಿದ್ದು, ಜುಲೈ 12ರಂದು ಸ್ವಾಮಿ ಚಿನ್ಮಯಾನಂದ ಹಾಜರಿರಬೇಕು ಎಂದು ನಿರ್ದೇಶಿಸಿದೆ.

ಪ್ರಕರಣ ಹಿಂಪಡೆಯಬೇಕು ಎಂದು ಉತ್ತರಪ್ರದೇಶ ಸರ್ಕಾರ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ ಅರ್ಜಿ ಸಲ್ಲಿಸಿದ್ದ ಸಂತ್ರಸ್ತೆ, ‘ಸರ್ಕಾರ ಈಗಲಾದರೂ ನನಗೆ ನ್ಯಾಯ ದೊರಕಿಸಿಕೊಡಲಿ’ ಎಂದು ಒತ್ತಾಯಿಸಿದ್ದಾರೆ.

ADVERTISEMENT

‘2011ರಲ್ಲಿ ಆಶ್ರಮದಲ್ಲಿದ್ದ ನನ್ನ ಮೇಲೆ ಚಿನ್ಮಯಾನಂದ ಅತ್ಯಾಚಾರವೆಸಗಿದ್ದರು. ನಾನು ಗರ್ಭಿಣಿಯಾಗಿದ್ದಾಗ ಗರ್ಭಪಾತಕ್ಕೆ ಒತ್ತಾಯ ಮಾಡಿದ್ದರು’ ಎಂದು ಆರೋಪಿಸಿ ಸಂತ್ರಸ್ತೆ ಕೊಟ್ವಾಲಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್‌ಐಆರ್‌ ಕೂಡ ದಾಖಲಾಗಿತ್ತು. ಆದರೆ, ಚಿನ್ಮಯಾನಂದ ಬಂಧನಕ್ಕೆ ಅಲಹಾಬಾದ್‌ ಹೈಕೋರ್ಟ್‌ ತಡೆ ನೀಡಿದೆ. 2012ರಿಂದ ಹೈಕೋರ್ಟ್‌ನಲ್ಲಿ ಈ ಪ್ರಕರಣ ಬಾಕಿ ಇದೆ.

ಬಿಜೆಪಿಯಿಂದ ಮೂರು ಬಾರಿ ಸಂಸದರಾಗಿದ್ದ  ಚಿನ್ಮಯಾನಂದ, 1999ರಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಆಂತರಿಕ ಭದ್ರತೆಯ ರಾಜ್ಯ ಸಚಿವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.