ADVERTISEMENT

ಕೇಂದ್ರದ ಸುಪರ್ದಿಗೆ ತಿರುಪತಿ ದೇವಸ್ಥಾನ?

ಟಿಟಿಡಿಗೆ ಭಾರತೀಯ ಸರ್ವೇಕ್ಷಣಾ ಇಲಾಖೆ ಪತ್ರ

​ಪ್ರಜಾವಾಣಿ ವಾರ್ತೆ
Published 5 ಮೇ 2018, 19:30 IST
Last Updated 5 ಮೇ 2018, 19:30 IST
ಕೇಂದ್ರದ ಸುಪರ್ದಿಗೆ ತಿರುಪತಿ ದೇವಸ್ಥಾನ?
ಕೇಂದ್ರದ ಸುಪರ್ದಿಗೆ ತಿರುಪತಿ ದೇವಸ್ಥಾನ?   

ಹೈದರಾಬಾದ್‌: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವೆಂದು ಗುರುತಿಸಲಾಗುವ ತಿರುಪತಿಯ ತಿರುಮಲ ದೇವಸ್ಥಾನ ಮತ್ತು ಅದರ ಅಧೀನ ದೇವಸ್ಥಾನಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ) ಮುಂದಾಗಿದೆ.

ಈ ದೇವಸ್ಥಾನಗಳ ಐತಿಹಾಸಿಕ ಸ್ವರೂಪ ಮತ್ತು ಪ್ರಾಚೀನತೆ ಸಂರಕ್ಷಿಸಲು ಇಲಾಖೆ ಈ ನಿರ್ಧಾರಕ್ಕೆ ಬಂದಿದೆ.

‘ದೇವಸ್ಥಾನಗಳ ಸಂರಕ್ಷಣೆಗೆ ಅನುಸರಿಸಬೇಕಾಗಿರುವ ಕ್ರಮಗಳ ಬಗ್ಗೆ ಅಗತ್ಯ ಮಾಹಿತಿ ಮತ್ತು ಛಾಯಾಚಿತ್ರ ಒದಗಿಸಬೇಕು ಮತ್ತು ಈ ಕೆಲಸದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಬೇಕು’ ಎಂದು ಇಲಾಖೆಯ ಸೂಪರಿಂಟೆಂಡೆಂಟ್‌ ಅವರು ಮೇ 4ರಂದು ಟಿಟಿಡಿಯ ಅಮರಾವತಿಯ ವಲಯದ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರ ಬರೆದಿದ್ದಾರೆ.

ADVERTISEMENT

ಆಂಧ್ರ ಪ್ರದೇಶ ಸರ್ಕಾರ ನೇಮಕ ಮಾಡಿರುವ ಆಡಳಿತ ಮಂಡಳಿಯು ಅನೇಕ ವರ್ಷಗಳಿಂದ ಈ ದೇವಸ್ಥಾನಗಳ ಉಸ್ತುವಾರಿ ನೋಡಿಕೊಳ್ಳುತ್ತಿದೆ.

‘ಸಂರಕ್ಷಣೆಗಾಗಿ ಈ ದೇವಸ್ಥಾನವನ್ನು ಸುಪರ್ದಿಗೆ ತೆಗೆದುಕೊಳ್ಳಲು ಭಾರತೀಯ ಸರ್ವೇಕ್ಷಣಾ ಇಲಾಖೆ ದೀರ್ಘ ಕಾಲದಿಂದ ಪ್ರಯತ್ನಿಸುತ್ತಲೇ ಇದೆ. ಈ ಪತ್ರದಲ್ಲಿ ಹೊಸದೇನು ಇಲ್ಲ’ ಎಂದು ಚಿಲ್ಕೂರು ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ರಂಗರಾಜನ್‌ ‘ಪ್ರಜಾವಾಣಿ’ಗೆ ಶನಿವಾರ ಪ್ರತಿಕ್ರಿಯಿಸಿದ್ದಾರೆ.

ಇಲಾಖೆಯ ನಿಲುವು ಬೆಂಬಲಿಸಿರುವ ಅವರು ‘ಸಾವಿರ ಕಂಬಗಳ ಮಂಟಪವನ್ನು ಧ್ವಂಸಗೊಳಿಸಿರುವ ರಾಜ್ಯ ಸರ್ಕಾರದ ಕಣ್ಣು ಈಗ ವ್ಯಾಕುಲದೇವಿ ದೇವಸ್ಥಾನದ ಮೇಲೆ ಬಿದ್ದಿದೆ’ ಎಂದು ಆರೋಪಿಸಿದ್ದಾರೆ.

‘ಕಡಪದ ಒಂಟಿಮಿಟ್ಟ ದೇವಸ್ಥಾನದ ಸ್ವರೂಪ ಬದಲಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆಡಳಿತಾರೂಢ ತೆಲುಗುದೇಶಂ ತೆಗೆದುಕೊಳ್ಳುತ್ತಿರುವ ಈ ಅಸಂಬದ್ಧ ನಿರ್ಧಾರದಿಂದ ನಮ್ಮ ಪರಂಪರೆ, ಸ್ಮಾರಕಗಳನ್ನು ರಕ್ಷಿಸಿಕೊಳ್ಳಬೇಕಾಗಿದೆ’ ಎಂದರು.

‘ಎನ್‌ಡಿಎದಿಂದ ಹೊರಬಂದಿರುವ ಚಂದ್ರಬಾಬು ನಾಯ್ಡು ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಧಾನಿ ಮೋದಿ ಈ ದೇವಸ್ಥಾನವನ್ನು ಕೇಂದ್ರ ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸತ್ತಿದ್ದಾರೆ’ ಎಂದು ತೆಲುಗುದೇಶಂ ಹಿರಿಯ ಮುಖಂಡರೊಬ್ಬರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.