ADVERTISEMENT

ಕೇಂದ್ರದ ಹೊಸ ಮಾರ್ಗದರ್ಶಿ ಸೂತ್ರಕ್ಕೆ ಸುಪ್ರೀಂ ಅವಕಾಶ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 10:35 IST
Last Updated 9 ಅಕ್ಟೋಬರ್ 2012, 10:35 IST
ಕೇಂದ್ರದ ಹೊಸ ಮಾರ್ಗದರ್ಶಿ ಸೂತ್ರಕ್ಕೆ ಸುಪ್ರೀಂ ಅವಕಾಶ
ಕೇಂದ್ರದ ಹೊಸ ಮಾರ್ಗದರ್ಶಿ ಸೂತ್ರಕ್ಕೆ ಸುಪ್ರೀಂ ಅವಕಾಶ   

ನವದೆಹಲಿ (ಪಿಟಿಐ): ದೇಶದಾದ್ಯಂತ ಹುಲಿ ಅಭಯಾರಣ್ಯಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ನಿಷೇಧ ಹೇರಿರುವ ತನ್ನ ಈ ಹಿಂದಿನ ಆದೇಶ ಸಡಿಲಿಕೆ ಮಾಡುವ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್ ಮಂಗಳವಾರ ಈ ಕುರಿತಂತೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ತಿಳಿಸಲು ಕೇಂದ್ರಕ್ಕೆ ಒಂದು ವಾರದ ಕಾಲಾವಕಾಶ ನೀಡಿದೆ.

ನ್ಯಾಯಮೂರ್ತಿಗಳಾದ ಎ.ಕೆ.ಪಟ್ನಾಯಕ್ ಮತ್ತು ಸ್ವತಂತ್ರ ಕುಮಾರ್ ಅವರನ್ನು ಒಳಗೊಂಡ ನ್ಯಾಯಪೀಠವು `ಒಂದು ವೇಳೆ ಹೊಸ ಮಾರ್ಗದರ್ಶಿ ಸೂತ್ರಗಳಿಂದ ಯಾವುದೇ ರಾಜ್ಯಕ್ಕೆ ತೊಂದರೆಯಾದರೆ ಅದನ್ನು ಅವು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸ್ವತಂತ್ರವಾಗಿವೆ~ ಎಂದು ಹೇಳಿತು.

`ಮಾರ್ಗದರ್ಶಿ ಸೂತ್ರಗಳನ್ನು ಊರ್ಜಿತಗೊಳಿಸುವ ಇಲ್ಲವೇ ಸಂವಿಧಾನ ಮೀರಿದ ಯಾವುದೇ ಮಾರ್ಗದರ್ಶಿ ಸೂತ್ರಗಳ ಘೋಷನೆ ನಾವು ಮಾಡುವುದಿಲ್ಲ~ ಎಂದು ಹೇಳಿದ ಪೀಠವು ಮುಂದಿನ ವಿಚಾರಣೆಯನ್ನು ಅಕ್ಟೋಬರ್ 16ಕ್ಕೆ ಮುಂದೂಡಿತು.

`ರಾಷ್ಟ್ರೀಯ ಹುಲಿ ಅಭಯಾರಣ್ಯ ಪ್ರಾಧಿಕಾರದಿಂದ ತಕ್ಷಣವೇ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸಿದ್ದಪಡಿಸಿ ಸಲ್ಲಿಸಲಾಗುವುದು~ ಎಂದು ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ದೇಶದಲ್ಲಿ ಕ್ಷೀಣಿಸುತ್ತಿರುವ ಹುಲಿ ಸಂತತಿ ಉಳಿಸುವ ಕ್ರಮದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಆಗಸ್ಟ್ 29ರ ವರೆಗೆ ದೇಶದಾದ್ಯಂತ ಇರುವ ಹುಲಿ ಅಭಯಾರಣ್ಯಗಳ ಹೃದಯ ಭಾಗದಲ್ಲಿ (ಕೋರ್ ಏರಿಯಾ) ಪ್ರವಾಸೋದ್ಯಮ ಚಟುವಟಿಕೆಗಳನ್ನು ನಿಷೇಧಿಸಿ ಜುಲೈ 24ರಂದು ಆದೇಶ ಹೊರಡಿಸಿತ್ತು. ನಂತರ ಅದನ್ನು ಸೆಪ್ಟೆಂಬರ್ 27ರ ವರೆಗೆ ವಿಸ್ತರಿಸಿತ್ತು.

ನಿಷೇಧವನ್ನು ವಿಸ್ತರಣೆ ಮಾಡುವ ವೇಳೆ ಪೀಠವು ನಿಯಂತ್ರಿತ ಪ್ರವಾಸೋದ್ಯಮ ಚಟುವಟಿಕೆಗಳನ್ನು ಕೂಡ ವಿರೋಧಿಸಿ, ಕ್ಷೀಣಿಸುತ್ತಿರುವ ಹುಲಿ ಸಂತತಿ ರಕ್ಷಿಸುವ ನಿಟ್ಟಿನಲ್ಲಿ ಕೇಂದ್ರ ಸೂಕ್ತ ಹೊಸ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಂತೆ ಹೇಳಿತ್ತು.

ನಂತರ ಸೆಪ್ಟೆಂಬರ್ 26 ರಂದು ನ್ಯಾಯಾಲಯದ ಮುಂದೆ ಹಾಜರಾದ  ಕೇಂದ್ರ ಸರ್ಕಾರವು ಮಧ್ಯಂತರ ನಿಷೇಧದ ಹಿನ್ನೆಲೆಯಲ್ಲಿ ರಾಜ್ಯಗಳಿಗಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಸಿದ್ದಪಡಿಸಲಾಗುವುದು ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.