ADVERTISEMENT

ಕೇಂದ್ರ ಸರ್ಕಾರದ ಚಿಂತನೆ: ಸಿವಿಸಿ ತನಿಖಾ ವಿಭಾಗಕ್ಕೆ ಹೆಚ್ಚು ಅಧಿಕಾರ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 19:30 IST
Last Updated 18 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ಜಾಗೃತ ಆಯೋಗದ (ಸಿವಿಸಿ) ತನಿಖಾ ವಿಭಾಗಕ್ಕೆ ಹೆಚ್ಚಿನ ಅಧಿಕಾರ ನೀಡುವ ಕುರಿತು ಕೇಂದ್ರ ಸರ್ಕಾರ ಚಿಂತಿಸುತ್ತಿದೆ.

ತನಿಖಾ ವಿಭಾಗಕ್ಕೆ ಹೆಚ್ಚಿನ ಸ್ವಾಯತ್ತತೆ ಹಾಗೂ ತಜ್ಞ ಸಿಬ್ಬಂದಿ ನೀಡುವ ಮೂಲಕ ಅದನ್ನು ಬಲಗೊಳಿಸುವ ಪ್ರಸ್ತಾಪವನ್ನು ಸರ್ಕಾರ ಪರಿಶೀಲಿಸುತ್ತಿದೆ. ಕಾಮನ್‌ವೆಲ್ತ್  ಕ್ರೀಡಾಕೂಟದಲ್ಲಿ ನಡೆದ ಅವ್ಯವಹಾರಗಳ ತನಿಖೆ ನಡೆಸಿದ್ದ ಮಾಜಿ ಮಹಾಲೇಖಪಾಲ ವಿ.ಕೆ. ಶುಂಗ್ಲು ನೇತೃತ್ವದ ಉನ್ನತ ಮಟ್ಟದ ಸಮಿತಿ ಈ ಶಿಫಾರಸು ಮಾಡಿರುವ ಹಿನ್ನೆಲೆಯಲ್ಲಿ ಇದು ಅನಿವಾರ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಕುರಿತು ನಿರ್ಧಾರ ಕೈಗೊಳ್ಳಲು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ)ಯ ಹಿರಿಯ ಅಧಿಕಾರಿಗಳು, ಸಿವಿಸಿ ಹಾಗೂ ಸ್ವತಂತ್ರ ಸಲಹಾಕಾರರನ್ನು ಒಳಗೊಂಡ ಕಾರ್ಯಕಾರಿ ಗುಂಪನ್ನು ರಚಿಸುವ ಸಾಧ್ಯತೆ ಇದೆ.

`ಸಿವಿಸಿ~ಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗವನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆ ವಿಭಾಗದ ಕೆಲಸವನ್ನು ಸ್ಪಷ್ಟವಾಗಿ ನಿರ್ದೇಶಿಸಲು ಸರ್ಕಾರ ಯೋಚಿಸುತ್ತಿದೆ. ಈ ಸಂಬಂಧ, ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹಿರಿಯ ಅಧಿಕಾರಿಗಳು, ಶೀಘ್ರವೇ ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್ ಅವರ ಜತೆ ಚರ್ಚಿಸಲಿದ್ದಾರೆ.

ಶುಂಗ್ಲು ಸಮಿತಿ ಶಿಫಾರಸಿನ ಅನ್ವಯ ಸೈಬರ್ ಭದ್ರತೆ, ವಂಚನೆ ಪ್ರಕರಣಗಳ ಪತ್ತೆ ಹಾಗೂ ವಿಧಿವಿಜ್ಞಾನ ಕೆಲಸಗಳಿಗಾಗಿ ಗುತ್ತಿಗೆ ಆಧಾರದಲ್ಲಿ ಆಯಾ ಕ್ಷೇತ್ರದ ತಜ್ಞರನ್ನು ನೇಮಿಸುವ ಕುರಿತೂ ಸರ್ಕಾರ ಚಿಂತಿಸುತ್ತಿದೆ.

ಕಾಮನ್‌ವೆಲ್ತ್  ಕ್ರೀಡಾಕೂಟದ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ಕಾರ್ಯಾಲಯಕ್ಕೆ ಆರು ವರದಿಗಳನ್ನು ಸಲ್ಲಿಸಿರುವ ಶುಂಗ್ಲು ಸಮಿತಿ, ಸಿಎಜಿ, ಸಿವಿಸಿ ಸೇರಿದಂತೆ ಇತರ ಲೆಕ್ಕಶೋಧ ಹಾಗೂ ತನಿಖಾ ಸಂಸ್ಥೆಗಳ ರಚನೆ ಹಾಗೂ ಕಾರ್ಯನಿರ್ವಹಣೆಯಲ್ಲಿ ಬದಲಾವಣೆ ಮಾಡುವಂತೆ ಸಲಹೆ ನೀಡಿದೆ.

ಸಿವಿಸಿಯ `ಮುಖ್ಯ ತಾಂತ್ರಿಕ ಪರೀಕ್ಷಕರ~ (ಸಿಟಿಇ) ವಿಭಾಗಕ್ಕೆ ಈಗಿರುವ ಅಧಿಕಾರ ಕಡಿಮೆ. ಅದನ್ನು ಹೆಚ್ಚಿಸಬೇಕು. ವಿನ್ಯಾಸ, ಪರೀಕ್ಷೆ ಇತ್ಯಾದಿ ವಿಚಾರಗಳಲ್ಲಿ `ಸಿಟಿಇ~ಗೆ ಸಲಹೆ ನೀಡಲು ತಜ್ಞರ ಸಮಿತಿ ನೇಮಿಸಬೇಕು. `ಸಿಟಿಇ~ ನಡೆಸುವ ತಪಾಸಣೆ ಆ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ಇರಬೇಕು. ಕೇವಲ ಮರಣೋತ್ತರ ಪರೀಕ್ಷೆಯಾಗಬಾರದು ಎಂದು ಶುಂಗ್ಲು ಸಮಿತಿ ಹೇಳಿದೆ.

`ಮುಖ್ಯ ತಾಂತ್ರಿಕ ಪರೀಕ್ಷಕರ~ ವಿಭಾಗ ಸರ್ಕಾರದ ವಿವಿಧ ಇಲಾಖೆಗಳು ಮಾಡಿದ ಕೆಲಸ ಹಾಗೂ ಸಾರ್ವಜನಿಕ ಉದ್ದೇಶಕ್ಕಾಗಿ ಖರೀದಿಸಿದ ವಸ್ತುಗಳ ಗುಣಮಟ್ಟ ಪರಿಶೀಲಿಸಲಿದೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.