ADVERTISEMENT

ಕೇಂದ್ರ ಸರ್ಕಾರ ದಲಿತರಿಗಾಗಿ ಏನೂ ಮಾಡಿಲ್ಲ: ಬಿಜೆಪಿ ಸಂಸದನಿಂದಲೇ ಗಂಭೀರ ಆರೋಪ

ಏಜೆನ್ಸೀಸ್
Published 8 ಏಪ್ರಿಲ್ 2018, 5:31 IST
Last Updated 8 ಏಪ್ರಿಲ್ 2018, 5:31 IST
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)   

ನವದೆಹಲಿ: ಕೇಂದ್ರ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ದಲಿತರಿಗಾಗಿ ಏನನ್ನೂ ಮಾಡಿಲ್ಲ ಎಂದು ಉತ್ತರ ಪ್ರದೇಶದ ನಗೀನಾ ಕ್ಷೇತ್ರದ ಬಿಜೆಪಿ ಸಂಸದ ಯಶವಂತ್ ಸಿಂಗ್ ಆರೋಪಿಸಿದ್ದಾರೆ.

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಶವಂತ್ ಪತ್ರ ಬರೆದಿದ್ದಾರೆ.

‘ನಾನು ಸಂಸದನಾಗಿ ಆಯ್ಕೆಯಾದ ಸಂದರ್ಭದಲ್ಲಿ ಮಾತ್ರ ನಿಮ್ಮನ್ನು ಭೇಟಿಯಾಗಿದ್ದು, ದಲಿತರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದ ಮಸೂದೆಯನ್ನು ಅಂಗೀಕರಿಸಬೇಕು ಎಂದು ಮನವಿ ಮಾಡಿದ್ದೆ. ವಿವಿಧ ಸಂಘಟನೆಗಳು ಆ ಬಗ್ಗೆ ನಮ್ಮಲ್ಲಿ ಮನವಿ ಮಾಡುತ್ತಲೇ ಇವೆ. ಆದರೆ, ದೇಶದ 30 ಕೋಟಿ ದಲಿತರಿಗೆ ನೆರವಾಗುವ ನಿಟ್ಟಿನಲ್ಲಿ, ನಾಲ್ಕು ವರ್ಷಗಳ ಅಧಿಕಾರ ಪೂರೈಸಿದ ಹೊರತಾಗಿಯೂ ನಿಮ್ಮ ಸರ್ಕಾರ ಏನೂ ಮಾಡಿಲ್ಲ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ADVERTISEMENT

ಅಖಿಲಭಾರತ ವೈದ್ಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ಪದವೀಧರರೂ ಆಗಿರುವ ಯಶವಂತ್ ಅವರು, ಮೀಸಲಾತಿಯಿಂದಾಗಿ ಮಾತ್ರ ತಾವು ಸಂಸದರಾಗುವುದು ಸಾಧ್ಯವಾಯಿತು. ಮೀಸಲಾತಿಯು ತಮ್ಮಂತಹವರಿಗೆ ಜೀವ ನೀಡುವ ಉಸಿರಾಗಿದೆ. ಅದಿಲ್ಲದೇ ಹೋದರೆ ಹಿಂದುಳಿದ ಸಮುದಾಯಗಳು ಉಳಿಯಲಾರವು ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಅಸಮಾಧಾನ ವ್ಯಕ್ತಪಡಿಸಿದ ನಾಲ್ಕನೇ ಸಂಸದ: ದಲಿತರ ವಿಷಯಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರದ ವಿರುದ್ಧ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ ನಾಲ್ಕನೇ ಬಿಜೆಪಿ ಸಂಸದರಾಗಿದ್ದಾರೆ ಯಶವಂತ್ ಸಿಂಗ್. ಉತ್ತರ ಪ್ರದೇಶದ ಭರಾಯಿಚ್ ಸಂಸದೆ ಸಾವಿತ್ರಿಬಾಯಿ ಫುಲೆ, ರಾಬರ್ಟ್ಸ್‌ಗಂಜ್ ಸಂಸದ ಛೋಟೇ ಲಾಲ್ ಖರ್‌ವಾರ್ ಮತ್ತು ಇಟಾ ಸಂಸದ ಅಶೋಕ್ ಕುಮಾರ್ ದೊಹ್ರೆ ಇತ್ತೀಚೆಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಬಿಜೆಪಿ ಆಡಳಿತ ತಮ್ಮ ವಿರುದ್ಧವೇ ಜಾತಿ ತಾರತಮ್ಯ ಎಸಗುತ್ತಿದೆ ಎಂದು ಛೋಟೇ ಲಾಲ್ ಖರ್‌ವಾರ್ ಇತ್ತೀಚೆಗೆ ಆರೋಪಿಸಿದ್ದರು.

‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾಗ ಎರಡು ಬಾರಿ ನನ್ನನ್ನು ಬೈದು ಹೊರಗೆ ಕಳುಹಿಸಲಾಗಿದೆ. ನನ್ನ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖರ್‌ವಾರ್ ಪತ್ರ ಬರೆದಿದ್ದರು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.