ನವದೆಹಲಿ (ಪಿಟಿಐ): ದೆಹಲಿ ವಿಧಾನಸಭೆಯಲ್ಲಿ ಜನ ಲೋಕಪಾಲ ಮಸೂದೆ ಮಂಡನೆಗೆ ವಿರೋಧ ಪಕ್ಷ ಬಿಜೆಪಿ ಮತ್ತು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಕಾಂಗ್ರೆಸ್ ಅವಕಾಶ ನೀಡದ ಕಾರಣ, ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಮ್ಮ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ.
ವಿಧಾನಸಭೆ ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವುದಕ್ಕೆ ದೆಹಲಿ ಸಂಪುಟ ಶಿಫಾರಸು ಮಾಡಿದೆ. ಭ್ರಷ್ಟಾಚಾರ ವಿರೋಧಿಸಿ ನಾಗರಿಕ ಸಮಾಜ ಚಳವಳಿಯ ಅಲೆಯಲ್ಲಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರ 49 ದಿನಗಳ ಸದ್ದು ಗದ್ದಲದಿಂದ ಕೂಡಿದ ಆಡಳಿತದ ನಂತರ ಅಧಿಕಾರದಿಂದ ಕೆಳಗಿಳಿದಿದೆ.
ಕೊನೆಯ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ರಾಜೀನಾಮೆಯನ್ನು ಲೆಫ್ಟಿನೆಂಟ್ ಗವ ರ್ನರ್ ನಜೀಬ್ ಜಂಗ್ ಅವರಿಗೆ ಸಲ್ಲಿಸಿದರು.
ಲೆ. ಗವರ್ನರ್ ಮೇಲೆ ಗರಂ: ಶುಕ್ರ ವಾರದವರೆಗೆ ಕೇಜ್ರಿವಾಲ್ ಮತ್ತು ನಜೀಬ್ ಜಂಗ್ ನಡುವೆ ಉತ್ತಮ ಬಾಂಧವ್ಯ ಇತ್ತು. ಎಎಪಿಯ ಇತರ ನಾಯಕರು ಲೆಫ್ಟಿನೆಂಟ್ ಗವರ್ನರ್ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದೆಲ್ಲ ನಿಂದಿಸಿದ್ದರೂ ಕೇಜ್ರಿವಾಲ್ ಮಾತ್ರ ಸಂಯಮದಿಂದಲೇ ಇದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಜಂಗ್ ವಿರುದ್ಧ ಕೇಜ್ರಿವಾಲ್ ಕಿಡಿ ಕಾರಿದ್ದಾರೆ. ಈಗಲೂ ಬ್ರಿಟಿಷ್ ಸರ್ಕಾರವೇ ಇದೆ ಎಂದು ಭಾವಿಸುತ್ತಿರುವ ಕೇಂದ್ರ ಸರ್ಕಾರದ ವೈಸ್‌ರಾಯ್ ತರಹ ಜಂಗ್ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ಜನ ಲೋಕಪಾಲ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಬಾರದು ಎಂದು ಜಂಗ್ ವಿಧಾನಸಭಾಧ್ಯಕ್ಷರಿಗೆ ಶುಕ್ರವಾರ ಸೂಚನೆ ನೀಡಿ ದ್ದರು. ಈ ಸೂಚನೆಯೇ ಸರ್ಕಾರ ಅಧಿಕಾರ ತ್ಯಾಗ ಮಾಡುವುದಕ್ಕೆ ಕಾರಣವಾಯಿತು.
ಸಂಪುಟ ಸಭೆಯಲ್ಲಿ ರಾಜೀನಾಮೆ ನಿರ್ಧಾರ ಕೈಗೊಂಡ ನಂತರ ವಿಧಾನಸಭಾ ಕಾರ್ಯಾಲಯದಿಂದ ಮೂರು ಕಿಲೋಮೀಟರ್ ದೂರದ ಕೇಂದ್ರ ದೆಹಲಿಯಲ್ಲಿರುವ ಎಎಪಿ ಕೇಂದ್ರ ಕಚೇರಿಗೆ ಧಾವಿಸಿದ ಕೇಜ್ರಿವಾಲ್, ಸುರಿಯುತ್ತಿದ್ದ ಮಳೆಯ ನಡುವೆಯೇ ಬೆಂಬಲಿಗರನ್ನು ಉದ್ದೇಶಿಸಿ ಮಾತ ನಾಡಿದರು.
ಅಂಬಾನಿ ವಿರುದ್ಧ ಕೆಂಡಾಮಂಡಲ: ಕೃಷ್ಣಾ–ಗೋದಾವರಿ ನದಿ ಪಾತ್ರದಿಂದ ತೆಗೆಯಲಾಗುವ ನೈಸರ್ಗಿಕ ಅನಿಲ ದರ ಏರಿಕೆ ನಿರ್ಧಾರ ವಿರೋಧಿಸಿ ರಿಲಯನ್ಸ್ ವಿರುದ್ಧ ಎಫ್‌ಐಆರ್ ದಾಖಲಿಸಿದ ನಂತರ ಸರ್ಕಾರವನ್ನು ಉರುಳಿಸುವುದಕ್ಕಾಗಿ ಕಾಂಗ್ರೆಸ್ ಮತ್ತು ಬಿಜೆಪಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರೊಂದಿಗೆ ಶಾಮೀಲಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಿಜವಾದ ಮುಖ ಈಗ ಬಯಲಾಗಿದೆ ಎಂದು ಟೀಕಿಸಿದರು.
‘ಕಳೆದ ಹತ್ತು ವರ್ಷ ಕಾಲ ಕಾಂಗ್ರೆಸ್ ಸರ್ಕಾರವನ್ನು ಅಂಬಾನಿ ಮುನ್ನಡೆಸಿದ್ದಾರೆ. ಕಾಂಗ್ರೆಸ್, ಅಂಬಾನಿ ಅವರ ಅಂಗಡಿ. ಬೇಕಾದಾಗ ಬೇಕಾದುದನ್ನು ಆ ಅಂಗಡಿಯಿಂದ ಅವರು ಖರೀದಿಸುತ್ತಾರೆ’ ಎಂದು ಕೇಜ್ರಿವಾಲ್ ಹಂಗಿಸಿ ದರು. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನೂ ಕೇಜ್ರಿವಾಲ್ ಬಿಡಲಿಲ್ಲ. ಕಳೆದ ಒಂದು ವರ್ಷ ದಿಂದ ಮೋದಿ ಅವರು ಕೂಡ ಅಂಬಾನಿ ಹಿಂದೆ ಇದ್ದಾರೆ. ‘ಮೋದಿ ಅವರ ಶ್ರೀಮಂತಿಕೆ ಎಲ್ಲಿಂದ ಬಂತು. ಅವರು ಬೃಹತ್, ದುಬಾರಿ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಇದ ಕ್ಕೆಲ್ಲ ಅವರಿಗೆ ಹಣ ಎಲ್ಲಿಂದ ಬಂತು?’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ವಿಜಯೋತ್ಸವ ಕಿಟಕಿಯಿಂದಲೇ ಅಧಿಕಾರ ತ್ಯಾಗದ ಘೋಷಣೆ !
ನವದೆಹಲಿ (ಪಿಟಿಐ): 48 ದಿನಗಳ ಹಿಂದೆ ಇಲ್ಲಿಯ ಕನಾಟ್ ಪ್ಲೇಸ್‌ನ ಹನುಮಾನ್ ರಸ್ತೆಯಲ್ಲಿರುವ ಆಮ್ ಆದ್ಮಿ ಪಾರ್ಟಿ ಕಚೇರಿಯ ಕಿಟಕಿಯಿಂದ ವಿಜಯೋತ್ಸವ ಆಚರಣೆಯ ಭಾಷಣ ಮಾಡಿದ್ದ ಅರವಿಂದ ಕೇಜ್ರಿವಾಲ್ ಶುಕ್ರವಾರ ಸಂಜೆ ಅದೇ ಕಿಟಕಿಯ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಷಯ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.