
ನವದೆಹಲಿ (ಪಿಟಿಐ):‘ಧರಣಿ ಮತ್ತು ಬೀದಿ ಕದನ’ ನಡೆಸುವ ಮೂಲಕ ಕೆಲವು ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕಾನೂನು ಸಚಿವ ಸೋಮನಾಥ್ ಭಾರ್ತಿ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಮಂಗಳವಾರ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್) ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಕೇಜ್ರಿವಾಲ್ ಹಾಗೂ ಭಾರ್ತಿ ಅವರನ್ನು ಬಂಧಿಸುವಂತೆ ಕೋರಿ ವಕೀಲ ಎಮ್. ಎಲ್ ಶರ್ಮಾ ಅವರು ಸಲ್ಲಿಸಿರುವ ಪಿಐಎಲ್ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ಪಿ ಸದಾಶಿವಂ ನೇತೃತ್ವದ ಪೀಠ ಶುಕ್ರವಾರಕ್ಕೆ ಕಾಯ್ದಿರಿಸಿತು.
‘ಕೇಜ್ರಿವಾಲ್ ಹಾಗೂ ಭಾರ್ತಿ ಅವರು ಕಾನೂನುಗಳನ್ನು ಉಲ್ಲಂಘಿಸಿ ಧರಣಿ ನಡೆಸುತ್ತಿದ್ದಾರೆ. ಅವರು ಸಾಂವಿಧಾನಿಕ ಸ್ಥಾನಗಳನ್ನು ಹೊಂದಿದ್ದು, ಇತರ ಸಂವಿಧಾನ ಬದ್ಧ ಅಧಿಕಾರಿಗಳ ವಿರುದ್ಧ ಬೀದಿಗಳಲ್ಲಿ ಧರಣಿ ನಡೆಸಲಾಗದು’ ಎಂದು ಅರ್ಜಿದಾರ ಆರೋಪಿಸಿದ್ದಾರೆ.
ಪಿಐಎಲ್ ಅನ್ನು ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮುಖ್ಯನ್ಯಾಯ ಮೂರ್ತಿಗಳ ಪೀಠದ ಎದುರು ಅರ್ಜಿದಾರ ಮನವಿ ಮಾಡಿದ್ದರು.
'ಇದೇ ಜನವರಿ 15–16ರ ಮಧ್ಯ ರಾತ್ರಿ ತಮ್ಮ ಮನೆಗಳಿಗೆ ನುಗ್ಗಿದ ಕೆಲ ಜನರ ಗುಂಪು, ಪೀಡಿಸುವ ಜತೆಗೆ ಕಿರುಕುಳ ನೀಡಿದೆ ಎಂದು ಆರೋಪಿಸಿ ನಾಲ್ವರು ವಿದೇಶೀ ಮಹಿಳೆಯರು ಎಫ್‌ಐಆರ್ ದಾಖಲಿಸಿದ ಪ್ರಕರಣದಲ್ಲಿ ತಮ್ಮ ಸಹೋದ್ಯೋಗಿ ಭಾರ್ತಿ ಅವರನ್ನು ತನಿಖೆ/ಕಾನೂನು ಕ್ರಮದಿಂದ ರಕ್ಷಿಸಲು ಕೇಜ್ರಿವಾಲ್ ಯತ್ನಿಸುತ್ತಿದ್ದಾರೆ’ ಎಂದೂ ಅರ್ಜಿದಾರ ಆರೋಪಿಸಿದ್ದಾರೆ.
ನೈಜಿರಿಯಾ ಹಾಗೂ ಉಗಾಂಡಾದ ತಲಾ ಇಬ್ಬರು ಮಹಿಳಾ ಪ್ರಜೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಎಫ್‌ಐಆರ್ ದಾಖಲಾಗಿತ್ತು.
ದಕ್ಷಿಣ ದೆಹಲಿಯಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ವೇಶ್ಯಾವಾಟಿಕೆ ನಡೆಸುತ್ತಿರುವ ಶಂಕಿತ ಜಾಲದ ಮೇಲೆ ದಾಳಿ ನಡೆಸಲು ನಿರಾಕರಿಸಿ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕೇಜ್ರಿವಾಲ್ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳು ಸೋಮವಾರದಿಂದ ರೈಲು ಭವನದ ಎದುರು ಧರಣಿ ನಡೆಸುತ್ತಿದ್ದಾರೆ.
ಪಟ್ಟು ಸಡಿಲಿಸದ ಕೇಂದ್ರ: ‘ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ವರದಿ ಬಂದ ಬಳಿಕವಷ್ಟೇ ಕ್ರಮ ಕೈಗೊಳ್ಳಲಾಗುವುದು’ ಎಂದು ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಮಂಗಳವಾರ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.