ತಿರುವನಂತಪುರ (ಪಿಟಿಐ): ಕೇರಳ ವಿಧಾನಸಭೆಗೆ ಬುಧವಾರ ಚುನಾವಣೆ ನಡೆಯಲಿದ್ದು ಬಹಿರಂಗ ಪ್ರಚಾರ ಮುಕ್ತಾಯದ ದಿನವಾದ ಸೋಮವಾರ ರಾಜ್ಯದ ವಿವಿಧೆಡೆ ಘರ್ಷಣೆ ನಡೆದ ವರದಿಯಾಗಿದೆ.
ತಿರುವನಂತಪುರ ವಿಧಾನಸಭಾ ಕ್ಷೇತ್ರದ ಪೂಂತುರ ಎಂಬಲ್ಲಿ ಆಡಳಿತಾರೂಢ ಎಲ್‌ಡಿಎಫ್ ಮತ್ತು ಪ್ರತಿಪಕ್ಷದ ಒಕ್ಕೂಟ ಯುಡಿಎಫ್ ಕಾರ್ಯಕರ್ತರ ನಡುವೆ ಕಲ್ಲು ತೂರಾಟ ಸಂಭವಿಸಿದ್ದು ಘಟನೆಯಲ್ಲಿ ಸಚಿವರೊಬ್ಬರು ಗಾಯಗೊಂಡಿದ್ದಾರೆ.
ಎಲ್‌ಡಿಎಫ್ ಒಕ್ಕೂಟದ ಅಭ್ಯರ್ಥಿಯಾದ ಕೇರಳ ಕಾಂಗ್ರೆಸ್ ಬಣದ (ಥಾಮಸ್) ಸಚಿವ ವಿ.ಸುರೇಂದ್ರನ್ ಪಿಳ್ಳೈ ಅವರಿದ್ದ ವಾಹನವನ್ನು ತಡೆಗಟ್ಟಿದ ಯುಡಿಎಫ್ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದರು.
ಇತ್ತೀಚೆಗೆ ಕೇಂದ್ರ ಸಚಿವ ಎ.ಕೆ.ಆಂಟನಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದ ವೇಳೆ ಎಲ್‌ಡಿಎಫ್ ಕಾರ್ಯಕರ್ತರು ಅಡ್ಡಿಯುಂಟು ಮಾಡಿದ್ದರು. ಆಂಟನಿ ಅವರ ರೋಡ್ ಷೋಗೆ ಅಡಚಣೆ ಮಾಡಿದ್ದರು ಎಂದು ಆರೋಪಿಸಿ ಈ ಕಲ್ಲು ತೂರಾಟ ನಡೆದಿದೆ.
ಮಲ್ಲಪುರದಲ್ಲೂ ಘರ್ಷಣೆ: ಮಲ್ಲಪುರ ಜಿಲ್ಲೆಯ ಪೆರಿಂತಲಮನ್ನ ಕ್ಷೇತ್ರದಲ್ಲೂ ಸೋಮವಾರ ಸಿಪಿಐ (ಎಂ) ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿದೆ. ಇದೇ ರೀತಿ ಮತ್ತನ್ನೂರು, ಕಯಾಂಕುಳಂ. ಕರುಂಗಪ್ಪಲಿ ಮತ್ತು ಕೈಪಮಂಗಲಗಳಲ್ಲೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಚುನಾವಣಾ ಘರ್ಷಣೆ ಸಂಭವಿಸಿದ ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.