ADVERTISEMENT

ಕೇರಳ ಸಚಿವರ ಮೋದಿ ಭೇಟಿ ಸೃಷ್ಟಿಸಿದ ವಿವಾದ

ಕಾಂಗ್ರೆಸ್, ಯುಡಿಎಫ್ ಮುಖಂಡರ ತೀವ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST

ತಿರುವನಂತಪುರ (ಪಿಟಿಐ): ಕಾರ್ಮಿಕ ಸಚಿವ ಮತ್ತು ಆರ್‌ಎಸ್‌ಪಿ (ಬಿ) ಮುಖಂಡ ಶಿಬು ಬೇಬಿ ಜಾನ್ ಇತ್ತೀಚೆಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗ್ದ್ದಿದ ವಿದ್ಯಮಾನ ಕೇರಳದ ಕಾಂಗ್ರೆಸ್ ಮತ್ತು ಯುಡಿಎಫ್ ಮುಖಂಡರಲ್ಲಿ ಅಸಮಾಧಾನ ಉಂಟು ಮಾಡಿದೆ. ವಿರೋಧ ಪಕ್ಷಗಳ ಮುಖಂಡರೂ ಸಚಿವರ ನಡೆಯನ್ನು ಟೀಕಿಸಿದ್ದಾರೆ. ಗುಜರಾತ್ ಅಭಿವೃದ್ಧಿ ಮಾದರಿಯು ಕೇರಳಕ್ಕೆ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಮತ್ತು ಯುಡಿಎಫ್ ಮುಖಂಡರು ಹೇಳಿದ್ದಾರೆ.

ಸಚಿವ ಜಾನ್ ಅವರು ಮೋದಿ ಅವರನ್ನು ಭೇಟಿಯಾಗಿರುವುದು ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಊಮ್ಮನ್ ಚಾಂಡಿ ಅವರು ಜಾನ್‌ಗೆ ಈ ಕುರಿತು ವಿವರಣೆ ನೀಡುವಂತೆ ಸೂಚಿಸಿದ್ದರು.

  ವಿವರಣೆ ನೀಡಿರುವ ಜಾನ್, ಕೌಶಲ ವೃದ್ಧಿ ಮತ್ತು ತರಬೇತಿ ಕುರಿತಂತೆ ಮಾತ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
  `ಜಾನ್ ಅವರಿಂದ ವಿವರಣೆ ಪಡೆಯಲಾಗಿದೆ. ಅಭಿವೃದ್ಧಿ ವಿಷಯದಲ್ಲಿ ಗುಜರಾತ್ ಮಾದರಿಯನ್ನು ರಾಜ್ಯದಲ್ಲಿ ಒಪ್ಪಲಾಗದು' ಎಂದು ಚಾಂಡಿ ಹೇಳಿದ್ದಾರೆ.

ಇದೇ ಮಾತನ್ನು ಕೇಂದ್ರ ಸಚಿವ ವಯಲಾರ್ ರವಿ ಕೂಡ ಆಡಿದ್ದಾರೆ. ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲದಂತೆ ಜಾನ್ ಅವರು ಮೋದಿ ಅವರನ್ನು ಭೇಟಿಯಾಗಿದ್ದರು ಎಂಬುದನ್ನು ನಂಬಲಾಗದು ಎಂದು ಸಿಪಿಎಂ ಮುಖಂಡರೂ ಆದ ವಿರೋಧ ಪಕ್ಷದ ನಾಯಕ ಅಚ್ಚುತಾನಂದನ್ ಹೇಳಿದ್ದಾರೆ.
ವರ್ಕಳ ಬಳಿ ಇರುವ ಶ್ರೀ ನಾರಾಯಣ ಗುರು ಮಠದಲ್ಲಿ ಮುಂದಿನ ವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಿಂದ ಕಮ್ಯುನಿಸ್ಟ್ ಮುಖಂಡರು ದೂರವಿರಬೇಕೆಂದು ಅಚ್ಚುತಾನಂದನ್ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.