ADVERTISEMENT

ಕೈದಿಯನ್ನು ಕರೆದೊಯ್ದ ನಕಲಿ ಪೊಲೀಸರು!

ಈತ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 19:59 IST
Last Updated 22 ಜುಲೈ 2013, 19:59 IST
ಕೈದಿಯನ್ನು ಕರೆದೊಯ್ದ ನಕಲಿ ಪೊಲೀಸರು!
ಕೈದಿಯನ್ನು ಕರೆದೊಯ್ದ ನಕಲಿ ಪೊಲೀಸರು!   

ಹೈದರಾಬಾದ್ (ಪಿಟಿಐ): ಪೊಲೀಸರ ವೇಷದಲ್ಲಿ ಕಾರಾಗೃಹಕ್ಕೆ ಬಂದ ವ್ಯಕ್ತಿಗಳಿಬ್ಬರು ಕೈದಿಯೊಬ್ಬನನ್ನು ತಮ್ಮೊಂದಿಗೆ ಕರೆದೊಯ್ದ ಸಿನಿಮೀಯ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ವಿವಿಧ ವಂಚನೆ ಪ್ರಕರಣಗಳಲ್ಲಿ ಈತ ಆಂಧ್ರದ ಪ್ರಕಾಶಂ ಜಿಲ್ಲೆ ಹಾಗೂ ಬೆಂಗಳೂರು ಪೊಲೀಸರಿಗೆ ಬೇಕಾಗಿದ್ದಾನೆ.

ಕರ್ನೂಲ್ ಜಿಲ್ಲೆಯ ಆದೋನಿ ಉಪ ಕಾರಾಗೃಹಕ್ಕೆ ಪೊಲೀಸ್ ಸಮವಸ್ತ್ರದಲ್ಲಿ ಬಂದ ವ್ಯಕ್ತಿಗಳಿಬ್ಬರು ಕೋರ್ಟ್‌ಗೆ ಹಾಜರುಪಡಿಸುವುದಾಗಿ ಹೇಳಿ ಕೈದಿಯನ್ನು ತಮ್ಮಂದಿಗೆ ಕರೆದೊಯ್ದಿದ್ದಾರೆ. ಈ ವೇಳೆ ಅವರು ನಕಲಿ ವಾರಂಟ್ ಪ್ರತಿಯನ್ನು ಜೈಲಿನ ಅಧಿಕಾರಿಗಳಿಗೆ ತೋರಿಸಿ ವಂಚಿಸಿದ್ದಾರೆ.

ಈ ಘಟನೆ ಜುಲೈ 17ರಂದು ನಡೆದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹೇಶ್‌ಕುಮಾರ್ ಎಂಬ ಕೈದಿಯನ್ನು ಆತ್ಮಾಕೂರ್ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಹೀಗಾಗಿ ಕಾರಾಗೃಹ ಅಧಿಕಾರಿಗಳು ಹಿಂದೂ-ಮುಂದೂ ಯೋಚಿಸದೇ ಕೈದಿಯನ್ನು ನಕಲಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ನಂತರ ತಾವು ಮೋಸ ಹೋಗಿರುವುದು ಜೈಲಿನ ಅಧಿಕಾರಿಗಳಿಗೆ ಮನವರಿಕೆಯಾಗಿದೆ. ತಲೆಮರೆಸಿಕೊಂಡಿರುವ ಈ ಮೂವರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.

ರಿಯಲ್ ಎಸ್ಟೇಟ್ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಮಹೇಶ್ ಕುಮಾರ್ ಜನರಿಂದ ಅಪಾರ ಪ್ರಮಾಣದ ಹಣವನ್ನು ಸಂಗ್ರಹಿಸಿ, ವಂಚಿಸಿದ್ದ. ಈ ಆರೋಪದ ಮೇಲೆ ಕಳೆದ ತಿಂಗಳು ಆತನನ್ನು ಬಂಧಿಸಿದ್ದ ಬಳ್ಳಾರಿಯ ಸಮೀಪದ ಯಮ್ಮಿಗನೂರು ಪೊಲೀಸರು, ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ಆರೋಪಿಯನ್ನು ಆದೋನಿ ಉಪ ಕಾರಾಗೃಹದಲ್ಲಿ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.