ADVERTISEMENT

ಕೊಯಿಕೋಡ್‌ನಲ್ಲಿ ನಾಡಬಾಂಬ್ ಸ್ಫೋಟ: ಐದು ಸಾವು

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 19:30 IST
Last Updated 27 ಫೆಬ್ರುವರಿ 2011, 19:30 IST

ಕೊಯಿಕೋಡ್ (ಪಿಟಿಐ): ಅಕ್ರಮವಾಗಿ ತಯಾರಿಸುತ್ತಿದ್ದ ನಾಡಬಾಂಬ್ ಸ್ಫೋಟಗೊಂಡು ಐವರು ಮೃತಪಟ್ಟು ಮೂರು ಮಂದಿ ಗಾಯಗೊಂಡಿರುವ ಘಟನೆ ನಾದಪುರಂನಲ್ಲಿ ಶನಿವಾರ ನಡೆದಿದೆ.

ಮೂವರು ಶನಿವಾರ ರಾತ್ರಿ ಸ್ಥಳದಲ್ಲಿಯೇ ಸಾವಿಗೀಡಾದರೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಭಾನುವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ನಾದಂಪುರದ ನರಿಕ್ಕಟ್ಟಿರಿ ಎಂಬ ನಿರ್ವಸಿತ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ರಿಯಾಜ್, ಶಮೀರ್, ಶಬೀರ್, ಶಬೀಲ್ ಮತ್ತು ರಫೀಕ್ ಎಂದು ಗುರುತಿಸಲಾಗಿದ್ದು, ಐಯುಎಂಎಲ್ ಪಕ್ಷದ ಕಾರ್ಯಕರ್ತರಾಗಿರುವ ಇವರೆಲ್ಲರೂ ನಾದಂಪುರಕ್ಕೆ ಸೇರಿದವರಾಗಿದ್ದಾರೆ. ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕಾನೂನು ಬಾಹಿರವಾಗಿ ನಾಡಬಾಂಬ್ ತಯಾರಿಕೆಯಲ್ಲಿ ತೊಡಗಿದ್ದರು. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಐಯುಎಂಎಲ್ ಮತ್ತು ಸಿಪಿಐ (ಎಂ) ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ರಾಜಕೀಯ ಘರ್ಷಣೆ ನಾದಂಪುರಂ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಂಟಾಗಿರುವ ಆತಂಕದ ವಾತಾವರಣ ಮುಂದುವರಿದಿದೆ.

ಇತ್ತೀಚಿನ ಕೆಲವು ದಿನಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 15 ಮತ್ತು ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ ಎಂಟು ಪ್ರಕರಣಗಳು ದಾಖಲಾಗಿವೆ. ಫೆ.20ರಂದು ಬಕೆಟ್ ಒಂದರಲ್ಲಿ ಒಂಬತ್ತು ಸ್ಟೀಲ್ ಬಾಂಬ್‌ಗಳು ಪತ್ತೆಯಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ತೊಂಡಿಯಾದ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಮುಲ್ಲಪಳ್ಳಿ ರಾಮಚಂದ್ರನ್, ‘ಈ ರೀತಿ ನಿರಂತರ ಘಟನೆಗಳು ಸಂಭವಿಸುತ್ತಿದ್ದರೆ ಶಾಂತಿ ಮತ್ತು ಸುವ್ಯವಸ್ಥೆಯನ್ನು ಮೂಡಿಸುವ ಉದ್ದೇಶದಿಂದ ನಡೆದ ಪ್ರಾದೇಶಿಕ ಮಟ್ಟದ ಸಭೆಗಳಿಗೆ ಅರ್ಥವಿರುವುದಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. ಇಂತಹ ಘಟನೆಗಳನ್ನು ತಡೆಯಲು ರಾಜಕೀಯ ಪಕ್ಷಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಹೇಳಿದರು.

ನಾದಂಪುರದಲ್ಲಿ ಶಾಂತಿಯುತ ವಾತಾವರಣ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಇತ್ತೀಚೆಗಷ್ಟೇ ಸರ್ವಪಕ್ಷ ಸಭೆ ನಡೆಸಿತ್ತು.

‘ಕಾಂಗ್ರೆಸ್ ಸಂಚು’
ತಿರುವನಂತಪುರ (ಪಿಟಿಐ): ಕಾಂಗ್ರೆಸ್ ನೇತೃತ್ವದ ಪ್ರಮುಖ ವಿರೋಧ ಪಕ್ಷ ಯುಡಿಎಫ್ ಮುಂಬರುವ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಹಿಂಸಾಚಾರ ಸೃಷ್ಟಿಸುವ ಸಂಚು ರೂಪಿಸಿದ್ದು, ಮೃತಪಟ್ಟ ಐಯುಎಂಎಲ್ ಕಾರ್ಯಕರ್ತರು ಬಾಂಬ್ ತಯಾರಿಕೆಯಲ್ಲಿ ತೊಡಗಿರುವುದು ಇದನ್ನು ದೃಢಪಡಿಸುತ್ತದೆ ಎಂದು ಕೇರಳ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಗೆ ಯುಡಿಎಫ್ ಅನ್ನು ದೂಷಿಸಿರುವ ಅಚ್ಯುತಾನಂದನ್ ಇದರ ಮಿತ್ರಪಕ್ಷವಾದ ಐಯುಎಂಎಲ್‌ನ ಕಾರ್ಯಕರ್ತರು ಬಾಂಬ್ ತಯಾರಿಸುವಾಗ ಮೃತಪಟ್ಟಿರುವುದು ಕಾಂಗ್ರೆಸ್‌ನ ಸಂಚನ್ನು ಸ್ಪಷ್ಟಪಡಿಸುತ್ತದೆ. ಘಟನೆಯ ಹೊಣೆ ಒಪ್ಪಿಕೊಂಡು ವಿರೋಧ ಪಕ್ಷದ ನಾಯಕ ಉಮ್ಮನ್ ಚಾಂಡಿ ಸಾರ್ವಜನಿಕರ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT