ADVERTISEMENT

ಕೋಮಾಸ್ಥಿತಿಯಲ್ಲಿ ಪತಿ: ಬ್ಯಾಂಕ್‌ ಖಾತೆ ನಿರ್ವಹಣೆಗೆ ಪತ್ನಿಯ ಕೋರಿಕೆ

ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ: ವರದಿ ನೀಡಲು ಉಪವಿಭಾಗಾಧಿಕಾರಿಗೆ ಸೂಚನೆ

ಪಿಟಿಐ
Published 12 ಅಕ್ಟೋಬರ್ 2017, 19:30 IST
Last Updated 12 ಅಕ್ಟೋಬರ್ 2017, 19:30 IST

ಮುಂಬೈ : ಕೋಮಾಸ್ಥಿತಿಯಲ್ಲಿರುವ ಪತಿಯ ಬ್ಯಾಂಕ್‌ ಖಾತೆ ನಿರ್ವಹಿಸುವ ಅಧಿಕಾರವನ್ನು ತನಗೆ ನೀಡಬೇಕು ಎಂದು ಮಹಿಳೆಯೊಬ್ಬರು ಬಾಂಬೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

‘63 ವರ್ಷದ ತನ್ನ ಪತಿ ಒಂದು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದಾರೆ. ಹೀಗಾಗಿ, ವೈದ್ಯಕೀಯ ವೆಚ್ಚ ಭರಿಸಲು ಪತಿಯ ಬ್ಯಾಂಕ್‌ ಖಾತೆಯನ್ನು ತಾನೇ ನಿರ್ವಹಿಸುವ ಅಗತ್ಯವಿದೆ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಮಹಿಳೆಯ ಪತಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯೊಂದರ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಇವರ ಆರೋಗ್ಯ ಸ್ಥಿತಿಯ ಬಗ್ಗೆ ಶುಕ್ರವಾರದ ಒಳಗೆ ವರದಿ ನೀಡುವಂತೆ ನ್ಯಾಯಮೂರ್ತಿ ಎಸ್‌.ಎಂ. ಕೆಮ್ಕರ್‌ ನೇತೃತ್ವದ ವಿಭಾಗೀಯ ಪೀಠ ಠಾಣೆಯ ಉಪವಿಭಾಗಾಧಿಕಾರಿ ಅವರಿಗೆ ಸೂಚಿಸಿದೆ.

ADVERTISEMENT

ತಂದೆಯ ಬ್ಯಾಂಕ್‌ ಖಾತೆ ನಿರ್ವಹಿಸಲು ತಾಯಿಗೆ ಅವಕಾಶ ನೀಡಲು ತಮ್ಮ ಯಾವುದೇ ತಕರಾರು ಇಲ್ಲ ಎನ್ನುವ ಪ್ರಮಾಣಪತ್ರವನ್ನು ದಂಪತಿಯ ಇಬ್ಬರು ಪುತ್ರಿಯರಿಂದ ಪಡೆದು ನ್ಯಾಯಾಲಯಕ್ಕೆ ಸಲ್ಲಿಸಲು ಸೂಚಿಸಲಾಗಿದೆ.

ಪತಿಯ ಅನಾರೋಗ್ಯದ ಕುರಿತು ಅಪೊಲೊ ಆಸ್ಪತ್ರೆಯ ನೀಡಿರುವ ದಾಖಲೆಗಳನ್ನು ನ್ಯಾಯಾಲಯಕ್ಕೆ ಈ ಮಹಿಳೆ ಸಲ್ಲಿಸಿದ್ದಾರೆ. ಪತಿ ಕಾರ್ಯನಿರ್ವಹಿಸುತ್ತಿದ್ದ ತೈಲ ಕಂಪೆನಿ ವೈದ್ಯಕೀಯ ವೆಚ್ಚಗಳನ್ನು ಭರಿಸಲು ನೆರವಾಗಿದೆ. ಆದರೂ, ಪತಿಗಾಗಿ ಔಷಧ ಮತ್ತು ಕುಟುಂಬದ ಇತರ ವೆಚ್ಚಗಳಿಗೆ ಪ್ರತಿ ತಿಂಗಳು ₹1ಲಕ್ಷ ಬೇಕಾಗುತ್ತದೆ. ಆದ್ದರಿಂದ, ಪತಿಯ ಖಾತೆಯಿಂದ ಹಣ ಪಡೆಯಲು ಅವಕಾಶ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.