ADVERTISEMENT

ಕೋಮು ಹಿಂಸೆ ತಡೆ ಮಸೂದೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 19:30 IST
Last Updated 10 ಸೆಪ್ಟೆಂಬರ್ 2011, 19:30 IST

ನವದೆಹಲಿ (ಪಿಟಿಐ): ಕೇಂದ್ರ ಸರ್ಕಾರದ ಉದ್ದೇಶಿತ ಕೋಮು ಹಿಂಸೆ ಹಾಗೂ ಯೋಜಿತ ದಾಳಿ ತಡೆ ಮಸೂದೆಯು ರಾಷ್ಟ್ರದ ಒಕ್ಕೂಟ ಸಂರಚನೆ ಛಿದ್ರಗೊಳಿಸುವ ಅಪಾಯಕಾರಿ ಶಾಸನವಾಗಿದೆ ಎಂದು ಯುಪಿಎ ಮಿತ್ರಪಕ್ಷವಾದ ತೃಣಮೂಲ ಕಾಂಗ್ರೆಸ್, ಕರ್ನಾಟಕ ಹಾಗೂ ಎನ್‌ಡಿಎ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.  ಸಭೆಗೆ ಎಂಟು ರಾಜ್ಯಗಳ ಮುಖ್ಯಮಂತ್ರಿಗಳು  ಗೈರುಹಾಜರಾಗಿದ್ದು ಚರ್ಚೆಗೆ ಗ್ರಾಸವಾಗಿದೆ.

ಮೂರು ವರ್ಷಗಳ ನಂತರ ಶನಿವಾರ ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಭಾವೈಕ್ಯ ಮಂಡಲಿಯ (ಎನ್‌ಐಸಿ) ಸಭೆಯಲ್ಲಿ ಪ್ರತಿಪಕ್ಷಗಳ ನಾಯಕರು ಮಸೂದೆಯ ಕರಡಿನಲ್ಲಿರುವ ಅಂಶಗಳಿಗೆ ಭಾರಿ ಆಕ್ಷೇಪ ವ್ಯಕ್ತಪಡಿಸಿದರು.
 
 

ಮಸೂದೆಯು ಒಬ್ಬ ವ್ಯಕ್ತಿಯನ್ನು ರಾಷ್ಟ್ರದ ಪ್ರಜೆ ಎಂಬ ದೃಷ್ಟಿಯಲ್ಲಿ ನೋಡುವುದಿಲ್ಲ. ವ್ಯಕ್ತಿ ಅಲ್ಪಸಂಖ್ಯಾತನೋ ಅಥವಾ ಬಹುಸಂಖ್ಯಾತನೋ ಎಂಬ ದೃಷ್ಟಿಯಲ್ಲಿ ಮಾತ್ರ ನೋಡುತ್ತದೆ. ಇದು ಕೋಮುವಾದಕ್ಕೆ ಪ್ರಚೋದನೆ ನೀಡುತ್ತದೆ
 - ಸುಷ್ಮಾ ಸ್ವರಾಜ್,  ಲೋಕಸಭಾ ಪ್ರತಿಪಕ್ಷದ ನಾಯಕಿ
 

ಮಸೂದೆ ಧರ್ಮನಿರಪೇಕ್ಷವಾಗಿಲ್ಲ ಎಂದು ಬಿಜೆಪಿ ದೂರಿತು. ಕೋಮು ಹಿಂಸಾಚಾರ ತಡೆಗೆ ಇನ್ನಷ್ಟು ಪ್ರಬಲ ಮಸೂದೆ ಅಗತ್ಯವೆಂದು ಎಡಪಕ್ಷಗಳು ಪ್ರತಿಪಾದಿಸಿದವು. ಬಿಎಸ್‌ಪಿ ತನ್ನ ನಿಲುವು ಏನೆಂಬುದನ್ನು ಸ್ಪಷ್ಪಪಡಿಸಿಲ್ಲ.

ಯುಪಿಎ ಮಿತ್ರಪಕ್ಷವಾದ ಟಿಎಂಸಿ ನಾಯಕಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಗುಜರಾತ್‌ನ ನರೇಂದ್ರ ಮೋದಿ, ಬಿಹಾರದ ನಿತೀಶ್ ಕುಮಾರ್, ತಮಿಳುನಾಡಿನ ಜೆ.ಜಯಲಲಿತಾ, ಉತ್ತರ ಪ್ರದೇಶದ ಮಾಯಾವತಿ, ಪಂಜಾಬಿನ ಪ್ರಕಾಶ್ ಸಿಂಗ್ ಬಾದಲ್, ಉತ್ತರಾಖಂಡದ ರಮೇಶ್ ಪೊಖ್ರಿಯಾಲ್  ಗೈರು ಹಾಜರಾಗಿದ್ದರು.

ಇವರೆಲ್ಲರೂ ತಮ್ಮ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿದ್ದರು. ಕೇರಳ ಮುಖ್ಯಮಂತ್ರಿ ಕಾಂಗ್ರೆಸ್ಸಿನ ಊಮ್ಮನ್ ಚಾಂಡಿ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದರಿಂದ ಸಭೆಗೆ ಬಂದಿರಲಿಲ್ಲ. ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಳ್ಳಬೇಕಿದ್ದ ಕೇಂದ್ರದ ನವೀಕೃತ ಇಂಧನಗಳ ಇಲಾಖೆ ಸಚಿವ ಫಾರೂಕ್ ಅಬ್ದುಲ್ಲ ಕೂಡ ಹಾಜರಿರಲಿಲ್ಲ.

ಸೋನಿಯಾ ಗಾಂಧಿ ನೇತೃತ್ವದ ರಾಷ್ಟ್ರೀಯ ಸಲಹಾ ಮಂಡಲಿ ಸಿದ್ಧಪಡಿಸಿರುವ ಈ ಮಸೂದೆಯ ಕರಡನ್ನು ಕಾಂಗ್ರೆಸ್ ಹಾಗೂ ಇತರ ಮಿತ್ರ ಪಕ್ಷಗಳು (ಟಿಎಂಸಿ ಹೊರತುಪಡಿಸಿ) ಬೆಂಬಲಿಸಿದವು.

`ಈ ಮಸೂದೆಯ ಪರಿಕಲ್ಪನೆಯನ್ನೇ ವಿರೋಧಿಸುವುದಾಗಿ ಲೋಕಸಭೆ ಪ್ರತಿಪಕ್ಷ ನಾಯಕಿ ಬಿಜೆಪಿಯ ಸುಷ್ಮಾ ಸ್ವರಾಜ್ ಹೇಳಿದರು.
 
ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ವರ್ಗೀಕರಣವೇ ನಮ್ಮಲ್ಲಿ ಸರಿ ಇಲ್ಲ. ಸಿಖ್ಖರು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರೇ ಬಹುಸಂಖ್ಯಾತರಿರುವ ರಾಜ್ಯಗಳು ರಾಷ್ಟ್ರದಲ್ಲಿವೆ. ಈ ಮಸೂದೆಯು ಒಬ್ಬ ವ್ಯಕ್ತಿಯನ್ನು ರಾಷ್ಟ್ರದ ಪ್ರಜೆ ಎಂಬ ದೃಷ್ಟಿಯಲ್ಲಿ ನೋಡುವುದಿಲ್ಲ. ಬದಲಾಗಿ ವ್ಯಕ್ತಿ ಅಲ್ಪಸಂಖ್ಯಾತನೋ ಅಥವಾ ಬಹುಸಂಖ್ಯಾತನೋ ಎಂಬ ದೃಷ್ಟಿಯಲ್ಲಿ ಮಾತ್ರ ನೋಡುತ್ತದೆ~ ಎಂದರು.

ಈ ಧೋರಣೆ ಕೋಮುವಾದವನ್ನು ಪ್ರಚೋದಿಸುತ್ತದೆ. ಬಹುಸಂಖ್ಯಾತರು ಹಾಗೂ ಅಲ್ಪಸಂಖ್ಯಾತರ ನಡುವಿನ ಕಂದಕವನ್ನು ಹಿಗ್ಗಿಸುತ್ತದೆ. ರಾಜ್ಯಗಳ ಅಧಿಕಾರವಾದ ಕಾನೂನು- ಸುವ್ಯವಸ್ಥೆ ಪಾಲನೆ ಕೇಂದ್ರದ ಚೌಕಟ್ಟಿಗೆ ಒಳಪಡಿಸುತ್ತದೆ ಎಂದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿನಿಧಿಯಾಗಿ ಸಭೆಗೆ ಬಂದಿದ್ದ ತೃಣಮೂಲ ಕಾಂಗ್ರೆಸ್ಸಿನ ಹಿರಿಯ ನಾಯಕ ದಿನೇಶ್ ತ್ರಿವೇದಿ, ಪ್ರಸ್ತುತ ಸ್ವರೂಪದಲ್ಲಿ ಮಸೂದೆಯನ್ನು ವಿರೋಧಿಸುವುದಾಗಿ ಸ್ಪಷ್ಟಪಡಿಸಿದರು.

`ಬಹುಸಂಖ್ಯಾತರ ದೌರ್ಜನ್ಯ ಮಾತ್ರ ಗಂಭೀರ~:  ಕರ್ನಾಟಕ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, `ಕಾನೂನು- ಸುವ್ಯವಸ್ಥೆ ಪಾಲನೆ ರಾಜ್ಯದ ಹೊಣೆ. ಕೇಂದ್ರದ ಹೊಸ ಕಾನೂನು ಜಾರಿಗೆ ಬಂದರೆ ಸಂವಿಧಾನದ ಆಶೋತ್ತರಗಳು, ಒಕ್ಕೂಟ ಸ್ವರೂಪಕ್ಕೆ ಧಕ್ಕೆಯಾಗಲಿದೆ~ ಎಂದರು.

ಕೇಂದ್ರದ ಕಾನೂನು ರಾಜ್ಯದ ಅಧಿಕಾರವನ್ನು ಮೊಟಕುಗೊಳಿಸುವ ಜತೆಗೆ ರಾಜಕೀಯವಾಗಿ ದುರ್ಬಳಕೆಯಾಗುವ ಅಪಾಯವಿದೆ. ಅಲ್ಪಸಂಖ್ಯಾತ ವಿಷಯಗಳ ಸಂಬಂಧ ದೇಶದಾದ್ಯಂತ ಏಕರೂಪ ವ್ಯವಸ್ಥೆ ಜಾರಿಗೆ ತರಲು ಹೊರಟಿರುವ ಕೇಂದ್ರ ಸರ್ಕಾರದ ದೃಷ್ಟಿಕೋನವೇ ಸರಿಯಿಲ್ಲ.

ಮತೀಯ ಅಲ್ಪಸಂಖ್ಯಾತರೇ ಆಗಲೀ ಅಥವಾ ಭಾಷಾ ಅಲ್ಪಸಂಖ್ಯಾತರೇ ಇರಲಿ ಅವರ ಸಮಸ್ಯೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವಾಗಿರುತ್ತವೆ. ಒಂದು ಕಡೆ ಅಲ್ಪಸಂಖ್ಯಾತವಾಗಿರುವ ಸಮುದಾಯ ಮತ್ತೊಂದು ಕಡೆ ಬಹುಸಂಖ್ಯಾತರಾಗಿರುತ್ತದೆ ಎಂಬ ನಿಲುವನ್ನು ಗೌಡರು ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಹುಸಂಖ್ಯಾತ ಸಮಾಜ ನಡೆಸುವ ದೌರ್ಜನ್ಯವನ್ನು ಗಂಭೀರವಾಗಿ ಪರಿಗಣಿಸುವ ಮಸೂದೆ, ಮತ್ತೊಂದೆಡೆ ಅಲ್ಪಸಂಖ್ಯಾತ ಸಮುದಾಯ ಬಹುಸಂಖ್ಯಾತರ ಮೇಲೆ ಎಸಗುವ ದೌರ್ಜನ್ಯವನ್ನು ಲಘುವಾಗಿ ತೆಗೆದುಕೊಳ್ಳುತ್ತದೆ. ಮಸೂದೆ ಏಕಪಕ್ಷೀಯವಾಗಿದೆ. ಪೂರ್ವಗ್ರಹದಿಂದ ಕೂಡಿದೆ ಎನ್ನಲು ಹಿಂಜರಿಕೆ ಇಲ್ಲ ಎಂದರು.

ಧ್ವನಿ ಎತ್ತಿದ ಪಟ್ನಾಯಕ್: ಈ ಮಸೂದೆಯು ರಾಜ್ಯಗಳ ಸ್ವಾಯತ್ತತೆಗೆ ನೇರವಾಗಿ ಭಂಗ ತರುವ ಕೆಲವು ಆಕ್ಷೇಪಾರ್ಹ ನಿಬಂಧನೆಗಳನ್ನು ಒಳಗೊಂಡಿದೆ ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಟೀಕಿಸಿದರು.

`ಕರಡು ಮಸೂದೆಯ ಪ್ರತಿಗಳನ್ನು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈ ಮುಂಚೆಯೇ ಕಳುಹಿಸಬೇಕಿತ್ತು. ಮಸೂದೆ ಕುರಿತು ಅಭಿಪ್ರಾಯ ಹೇಳಲು ಇದು ಸೂಕ್ತ ಸಮಯ ಅಲ್ಲ~ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಅಭಿಪ್ರಾಯ ರವಾನಿಸಿದ್ದರು. ಅವರ ಗೈರುಹಾಜರಾತಿಯಲ್ಲಿ ಅವರ ಪ್ರತಿನಿಧಿ ಇದನ್ನು ಓದಿದರು.

`ಮತ್ತೊಂದು ಪಾಠ~: ದೆಹಲಿ ಹೈಕೋರ್ಟ್ ಬಳಿ ನಡೆದ ಸ್ಫೋಟವು ಭದ್ರತೆ ವಿಷಯದಲ್ಲಿ ಸದಾ ಕಟ್ಟೆಚ್ಚರ ಅಗತ್ಯ ಎಂಬುದನ್ನು ನೆನಪಿಸಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರೆ, ಹಿಂಸೆ ಪ್ರತಿಭಟನೆಯ ಸಾಧನವಾಗುತ್ತಿರುವುದು ರಾಷ್ಟ್ರಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT