ADVERTISEMENT

ಕ್ಯುಆರ್‌ ಕೋಡ್‌ನಲ್ಲಿ ಫೋಟೊ ಸಹಿತ ಮಾಹಿತಿ

ಆಧಾರ್‌: ಆಫ್‌ಲೈನ್‌ ಗುರುತು ದೃಢೀಕರಣಕ್ಕೆ ಸೌಲಭ್ಯ

ಪಿಟಿಐ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಕ್ಯುಆರ್‌ ಕೋಡ್‌ನಲ್ಲಿ ಫೋಟೊ ಸಹಿತ ಮಾಹಿತಿ
ಕ್ಯುಆರ್‌ ಕೋಡ್‌ನಲ್ಲಿ ಫೋಟೊ ಸಹಿತ ಮಾಹಿತಿ   

ನವದೆಹಲಿ: ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರವು (ಯುಐಡಿಎಐ) ಇ–ಆಧಾರ್‌ಗೆ ಡಿಜಿಟಲ್‌ ಸಹಿ ಹೊಂದಿರುವ ಹೆಚ್ಚು ಸುರಕ್ಷಿತವಾದ ಕ್ಯುಆರ್‌ ಕೋಡ್‌ ರೂಪಿಸಿದೆ. ಇದರಲ್ಲಿ ಆಧಾರ್‌ದಾರರ ಮಾಹಿತಿಯ ಜತೆಗೆ ಫೋಟೊ ಕೂಡ ಇರುತ್ತದೆ. ಇದನ್ನು ಬಳಸಿಕೊಂಡು ಆಫ್‌ಲೈನ್‌ (ಅಂತರ್ಜಾಲ ಸಂಪರ್ಕ ಇಲ್ಲದೆ) ದೃಢೀಕರಣ ಮಾಡುವುದಕ್ಕೆ ಅವಕಾಶ ದೊರೆಯುತ್ತದೆ.

ಇ–ಆಧಾರ್‌ನಲ್ಲಿ ಮೊದಲಿನಿಂದಲೂ ಕ್ಯುಆರ್‌ ಕೋಡ್‌ ಇತ್ತು. ಈಗ, ಡಿಜಿಟಲ್‌ ಸಹಿ ಮತ್ತು ಫೋಟೊ ಇರುವ ಕ್ಯುಆರ್‌ ಕೋಡ್‌ ಪರಿಚಯಿಸಲಾಗಿದೆ.

ಕ್ಯುಆರ್‌ ಕೋಡ್‌ ಎಂಬುದು ಒಂದು ರೀತಿಯ ಸಂಕೇತ ವ್ಯವಸ್ಥೆಯಾಗಿದ್ದು, ಅದರಲ್ಲಿ ಅಡಕವಾಗಿರುವ ಮಾಹಿತಿಯನ್ನು ಉಪಕರಣಗಳ ಮೂಲಕ ಮಾತ್ರ ಓದುವುದಕ್ಕೆ ಸಾಧ್ಯ. ಇ–ಆಧಾರ್‌ ಎಂಬುದು ಆಧಾರ್‌ನ ವಿದ್ಯುನ್ಮಾನ ಅವತರಣಿಕೆಯಾಗಿದ್ದು ಅದನ್ನು ಯುಐಡಿಎಐ ಜಾಲತಾಣದಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ADVERTISEMENT

ಡಿಜಿಟಲ್‌ ಸಹಿ ಹೊಂದಿರುವ ಕ್ಯುಆರ್‌ ಕೋಡ್‌ ಅತ್ಯಂತ ಸರಳವಾದ ವ್ಯವಸ್ಥೆ. ಇದನ್ನು ಬಳಸಿಕೊಂಡು ಆಧಾರ್‌ ಹೊಂದಿರುವ ವ್ಯಕ್ತಿಯ ಗುರುತನ್ನು ಅಂತರ್ಜಾಲ ಸಂಪರ್ಕ ಇಲ್ಲದೆಯೂ ದೃಢೀಕರಿಸುವುದಕ್ಕೆ ಸಾಧ್ಯ ಎಂದು ಯುಐಡಿಎಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ ಭೂಷಣ್‌ ಪಾಂಡೆ ಹೇಳಿದ್ದಾರೆ.

ಇ–ಆಧಾರ್‌ ಕ್ಯುಆರ್‌ ಕೋಡ್‌ ಓದುವ ಸಾಫ್ಟ್‌ವೇರ್‌ ಯುಐಡಿಎಐಯ ಜಾಲತಾಣದಲ್ಲಿ ಮಾರ್ಚ್‌ 27ರಿಂದಲೇ ಲಭ್ಯ ಇದೆ ಎಂದು ಅವರು ತಿಳಿಸಿದ್ದಾರೆ.

ಆಧಾರ್‌ ದೃಢೀಕರಣ ಸಮಸ್ಯೆಯಿಂದಾಗಿ ವಿವಿಧ ಸೌಲಭ್ಯಗಳನ್ನು ನಿರಾಕರಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಈಗ ಅಂತರ್ಜಾಲ ಇಲ್ಲದೆಯೂ ಗುರುತು ದೃಢೀಕರಣ ಸಾಧ್ಯವಾಗುವುದರಿಂದ ಸೌಲಭ್ಯ ನಿರಾಕರಣೆ ಪ್ರಶ್ನೆ ಎದುರಾಗದು ಎಂದು ಯುಐಡಿಎಐ ಮೂಲಗಳು ತಿಳಿಸಿವೆ.

ಬ್ಯಾಂಕುಗಳು ಮತ್ತು ಇತರ ಸೇವಾ ಸಂಸ್ಥೆಗಳಲ್ಲಿ ಈ ವ್ಯವಸ್ಥೆ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.