ಇಟಾನಗರ (ಪಿಟಿಐ): ನಾಲ್ಕು ದಿನಗಳಿಂದ ನಾಪತ್ತೆಯಾಗಿರುವ ಅರುಣಾಚಲ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರಿದ್ದ ಹೆಲಿಕಾಪ್ಟರ್‌ಗಾಗಿ ಸೆಲಾ ಪಾಸ್‌ನ ಪರ್ವತ ಪ್ರದೇಶಗಳಲ್ಲಿ ಮಂಗಳವಾರ ಸುಮಾರು 3000 ಭದ್ರತಾ ಸಿಬ್ಬಂದಿ ನೆಲಮಟ್ಟದ ಶೋಧ ಕೈಗೊಂಡಿದ್ದಾರೆ. ಪ್ರತಿಕೂ ಹವಾಮಾನದಿಂದಾಗಿ ವೈಮಾನಿಕ ಶೋಧ ಕಾರ್ಯಾಚರಣೆ ರದ್ದುಗೊಂಡಿದೆ.
ಎರಡು ಚೇತಕ್ ಹೆಲಿಕಾಪ್ಟರ್ ಒಳಗೊಂಡಂತೆ ನಾಲ್ಕು ಹೆಲಿಕಾಪ್ಟರ್‌ಗಳು ತೇಜ್‌ಪುರ ಮತ್ತುಗುವಾಹಟಿಯಲ್ಲಿದ್ದು ಹವಾಮಾನ ಸುಧಾರಿಸುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಲಿವೆ ಎಂದು ಮೂಲಗಳು ಹೇಳಿವೆ.
ರಾತ್ರಿಯಿಡೀ ಮಳೆ ಸುರಿದಿದ್ದರಿಂದ ವೈಮಾನಿಕ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು. ಒಟ್ಟು 3000 ಭದ್ರತಾ ಸಿಬ್ಬಂದಿ ಸೆಲಾ ಪಾಸ್‌ನ ಪರ್ವತ ಪ್ರದೇಶಗಳಲ್ಲಿ ತಳಮಟ್ಟದ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.
ಪೊಲೀಸರೊಂದಿಗೆ ಐಟಿಬಿಪಿ ಮತ್ತು ಎಸ್‌ಎಸ್‌ಬಿಯವರು ತವಾಂಗ್‌ನಿಂದ ಸುಮಾರು 85 ಕಿಮೀ ದೂರದಲ್ಲಿರುವ ಸೆಲಾ ಪಾಸ್‌ನಲ್ಲಿನ ದಿರಂಗ್‌ನ ನಾಗಾ ಜಿಜಿಯತ್ತ ತೆರಳಿದ್ದಾರೆ.ಶೋಧ ಕಾರ್ಯ ನಡೆಯುತ್ತಿರುವುದರಿಂದ ಖಂಡು ಅವರು ಬದುಕುಳಿದಿರುವ ಸಾಧ್ಯತೆ ಕುರಿತು ಸರ್ಕಾರ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಸಚಿವ ವಿ. ನಾರಾಯಣಸ್ವಾಮಿ ಹೇಳಿದ್ದಾರೆ.
ಸೋಮವಾರ ಇಸ್ರೊಉಪಗ್ರಹ ಸೂಚಿಸಿದ್ದ ಪ್ರದೇಶದಿಂದ ಸುಮಾರು ಆರೇಳು ಕಿಮೀ ದೂರದಲ್ಲಿರುವ ಚರ್ಬೆಲಾವನ್ನು ಶೋಧ ತಂಡಗಳು ತಲುಪಿವೆ. ಈ ಪ್ರದೇಶದಲ್ಲಿ ಕೆಲವು ಲೋಹದ ವಸ್ತುಗಳು ಪತ್ತೆಯಾಗಿದ್ದು ಇವು ಹೆಲಿಕಾಪ್ಟರ್ ಭಾಗವಾಗಿರಬಹುದು ಎನ್ನಲಾಗಿದೆ.
ಹಾಗಾಗಿ ಶೋಧ ಕಾರ್ಯಕ್ಕೆ ಭೂತಾನ್ ಮತ್ತು ದಿರಂಗ್ ಪ್ರದೇಶವನ್ನೇ ಕೇಂದ್ರ ವಾಗಿಸಿಕೊಳ್ಳಲಾಗಿದೆ.
ಭಾರತೀಯ ಸೇನಾಪಡೆ, ಐಟಿಬಿಪಿ ಮತ್ತು ಎಸ್‌ಎಸ್‌ಬಿಯ 3000 ಸಿಬ್ಬಂದಿ ರಾಜ್ಯ ಪೊಲೀಸರ ನೆರವಿನೊಂದಿಗೆ ನೆಲ ಮಟ್ಟದ ಶೋಧ ಕಾರ್ಯವನ್ನು ಕೈಗೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ಹೇಳಿವೆ. ಎರಡು ಐಎಎಫ್ ಮಿ-17 ಹೆಲಿಕಾಪ್ಟರುಗಳು ಮಂಗಳವಾರ ಬೆಳಿಗ್ಗೆ ತವಾಂಗ್‌ನಿಂದ ವೈಮಾನಿಕ ಶೋಧ ಕೈಗೊಂಡಿದ್ದವು. ಆದರೆ ಪರ್ವತಗಳ ಮೇಲೆ ಮಂಜು ಕವಿದಿದ್ದರಿಂದ ಸೆಲಾ ಪಾಸ್‌ನಿಂದ ಹಿಂತಿರುಗಬೇಕಾಯಿತು.
ಹವಾವಾನ ಸುಧಾರಿಸಿದರೆ ನಾಲ್ಕು ಮಿ-17 ಹೆಲಿಕಾಪ್ಟರುಗಳು ಶೋಧ ಕಾರ್ಯ ಮುಂದುವರಿಸಲಿವೆ. ಈ ಹೆಲಿಕಾಪ್ಟರುಗಳು ತೇಜ್‌ಪುರದಲ್ಲಿ ಸಜ್ಜಾಗಿವೆ ಎಂದು ರಕ್ಷಣಾ ವಕ್ತಾರ ಎನ್.ಎನ್. ಜೋಶಿ ತಿಳಿಸಿದ್ದಾರೆ.
ಈ ಮಧ್ಯೆ ಪರಿಸ್ಥಿತಿ ಅವಲೋಕಿಸಲು ಬಿಕ್ಕಟ್ಟು ನಿರ್ವಹಣಾ ಸಮಿತಿಯು ಎರಡು ಸಲ ಸಭೆ ನಡೆಸಿತು. ಕೇಂದ್ರ ಸಚಿವರುಗಳಾದ ವಿ. ನಾರಾಯಣ ಸ್ವಾಮಿ ಮತ್ತು ಮುಕುಲ್ ವಾಸ್ನಿಕ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ. ಧನಿರಾಂ ಶಾಂಡಿಲ್ ಮತ್ತು ಕಾರ್ಯದರ್ಶಿ ಸಂಜಯ್ ಬಪನ್ ಸಭೆಯಲ್ಲಿ ಪಾಲ್ಗೊಂಡಿದ್ದರು.
ಅರುಣಾಚಲ ಸಿ.ಎಂ ಖಂಡು ಅವರನ್ನು ಹೊತ್ತ ಹೆಲಿಕಾಪ್ಟರ್ ತವಾಂಗ್‌ನಿಂದ ಹೆಲಿಕಾಪ್ಟರ್‌ನಲ್ಲಿ ಇಟಾನಗರಕ್ಕೆ ತೆರಳುವಾಗ ನಾಪತ್ತೆಯಾಗಿತ್ತು. ಖಂಡು ಅವರೊಂದಿಗೆ ಪೈಲಟ್‌ಗಳಾದ ಕ್ಯಾಪ್ಟನ್ ಟಿ.ಎಸ್. ಮಮಿಕ್, ಖಂಡು ಅವರ ಭದ್ರತಾಧಿಕಾರಿ ಯೆಷಿ ಚೊಡ್ಡಕ್ ಮತ್ತು ಯೆಷಿ ಲಮು ಮತ್ತು ತವಾಂಗ್ ಶಾಸಕರ ಸೋದರಿ ಸೇವಂಗ್ ಹೆಲಿಕಾಪ್ಟರ್‌ನಲ್ಲಿದ್ದರು.
10 ಲಕ್ಷ ಬಹುಮಾನ
ಹೆಲಿಕಾಪ್ಟರ್ ಬಗ್ಗೆ ಮಾಹಿತಿ ನೀಡಿದವರಿಗೆ ರೂ 10ಲಕ್ಷ ಬಹು ಮಾನ ನೀಡುವುದಾಗಿ ಅರುಣಾಚಲ ಪ್ರದೇಶ ಸರ್ಕಾರ ಘೋಷಿಸಿದೆ. ತವಾಂಗ್ ಸಾಂಸ್ಕೃತಿಕ ಸಮಿತಿ ಕೂಡ ಹೆಲಿಕಾಪ್ಟರ್ ಕುರಿತ ಮಾಹಿತಿಗೆ ರೂ 5 ಲಕ್ಷ ಬಹುಮಾನ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.