ADVERTISEMENT

ಖಾತೆ ಕಳಪೆಯಲ್ಲ: ಅನಂತ್‌

​ಪ್ರಜಾವಾಣಿ ವಾರ್ತೆ
Published 28 ಮೇ 2014, 19:30 IST
Last Updated 28 ಮೇ 2014, 19:30 IST

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿ ನನಗೆ ಕೊಟ್ಟಿರುವ ಖಾತೆ ಕಳಪೆಯಲ್ಲ. ರಾಜಕೀಯವಾಗಿ ಅವರು ನನ್ನನ್ನು ಕಡೆಗಣಿಸಿಲ್ಲ’ ಎಂದು ಕೇಂದ್ರ ರಸ­ಗೊಬ್ಬರ ಖಾತೆ ಸಚಿವ ಅನಂತ ಕುಮಾರ್‌ ಬುಧವಾರ ಸ್ಪಷ್ಟಪಡಿಸಿದರು.

ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ­ರಾಗಿ ಅಧಿಕಾರ ವಹಿಸಿ­ಕೊಂಡ ಬಳಿಕ ಮಾಧ್ಯಮ ಪ್ರತಿನಿ­ಧಿಗಳ ಜತೆ ಮಾತನಾಡಿದ ಅನಂತ ಕುಮಾರ್‌, ‘ನರೇಂದ್ರ ಮೋದಿ ಅವರು ನನ್ನನ್ನು ಕಡೆಗಣಿಸಿದ್ದಾರೆ. ಮಹತ್ವವಲ್ಲದ ಕಳಪೆ ಖಾತೆ ಕೊಟ್ಟಿದ್ದಾರೆ’ ಎಂಬ ವರದಿಗಳು ಕೇವಲ ಮಾಧ್ಯಮ ಸೃಷ್ಟಿ ಎಂದು ಅಭಿಪ್ರಾಯಪಟ್ಟರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊರಾರ್ಜಿ ದೇಸಾಯಿ, ರಾಜೀವ್‌ ಗಾಂಧಿ, ವಾಜಪೇಯಿ ಒಳ­ಗೊಂಡಂತೆ ನಾಲ್ವರು ಪ್ರಧಾನ ಮಂತ್ರಿಗಳು ರಸ­ಗೊಬ್ಬರ ಖಾತೆಯನ್ನು  ತಮ್ಮ ಬಳಿ ಇಟ್ಟು­ಕೊಂಡಿದ್ದರು. ಈ ಇಲಾಖೆ ಎಷ್ಟು ಮಹತ್ವದ್ದು ಎನ್ನು­ವು­ದಕ್ಕೆ ಇದೊಂದೇ ನಿದರ್ಶನ ಸಾಕು. ರಸಗೊಬ್ಬರ ಇಲಾಖೆ­ಯಲ್ಲಿ ಬೇಕಾದಷ್ಟು ಒಳ್ಳೆಯ ಕೆಲಸ ಮಾಡ­ಬಹುದಾಗಿದೆ. ಪ್ರಧಾನಿ ನನ್ನ ಮೇಲೆ ವಿಶ್ವಾಸವಿಟ್ಟು ಈ ಖಾತೆ ನೀಡಿದ್ದಾರೆ ಎಂದು ಅವರು ವ್ಯಾಖ್ಯಾನಿಸಿದರು.

ಸಂಪುಟ ದರ್ಜೆ ಸಚಿವರಲ್ಲಿ ಹೆಚ್ಚು, ಕಡಿಮೆ ಎಂದೇ­ನಿಲ್ಲ. ಎಲ್ಲರೂ ಸಮಾ­ನರು. ಅದೂ ಒಂದು ಕ್ರಿಕೆಟ್‌ ತಂಡವಿ­ದ್ದಂತೆ. ತಂಡದಲ್ಲಿ ಬ್ಯಾಟ್ಸ್‌ಮನ್‌, ಬೌಲರ್‌, ಕೀಪರ್‌ ಸೇರಿದಂತೆ ಪ್ರತಿ­ಯೊಬ್ಬರೂ ಮುಖ್ಯ. ಎಷ್ಟೋ ಸಂಕಷ್ಟದ ಸಂದರ್ಭದಲ್ಲಿ ಪಂದ್ಯ ಗೆಲ್ಲಿಸುವ ದೊಡ್ಡ ಜವಾಬ್ದಾರಿ ಕೊನೆಯ ಬ್ಯಾಟ್ಸ್‌ಮನ್‌ ಮೇಲೇ ಇರುತ್ತದೆ ಎಂದು ನೂತನ ಸಚಿವರು ವಿಶ್ಲೇಷಿಸಿದರು.

ಮೋದಿ ಅವರ ಜತೆ ನನಗೆ ಉತ್ತಮ ಸಂಬಂಧವಿದೆ. ಅದೇ ಕಾರಣಕ್ಕೆ ನನಗೆ ರಸಗೊಬ್ಬರ ಖಾತೆ ನೀಡಿದ್ದಾರೆ. ಇಲಾಖೆ ನಿರ್ವಹಣೆ ದೊಡ್ಡ ಸವಾಲಿನ ಕೆಲಸ. ಇಡೀ ಕೃಷಿ ಕ್ಷೇತ್ರ ಇಲಾಖೆಯನ್ನು ಅವಲಂಬಿಸಿದೆ. ರೈತರಿಗೆ ಕಡಿಮೆ ದರ­ದಲ್ಲಿ ರಸಗೊಬ್ಬರ ಪೂರೈಸುವುದಕ್ಕೆ ತಮ್ಮ ಆದ್ಯತೆ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.