ಡೆಹ್ರಾಡೂನ್ (ಪಿಟಿಐ): ಬಾಲಿವುಡ್ ನಟರಾದ ಶಾರುಕ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರ ಚಿತ್ರಗಳನ್ನು ಬಹಿಷ್ಕರಿಸಿ ಎಂದು ಬಜರಂಗದಳಕ್ಕೆ ಕರೆ ಕೊಟ್ಟಿರುವ ಬಿಜೆಪಿ ನಾಯಕಿ ಸಾಧ್ವಿ ಪ್ರಾಚಿ, ಖಾನ್‌ತ್ರಯರ ಚಿತ್ರಗಳ ಪೋಸ್ಟರ್ಗಳನ್ನು ಹರಿದು ಬೆಂಕಿಗೆ ಹಾಕಿ ಎಂದಿದ್ದಾರೆ.
ವಿಶ್ವ ಹಿಂದೂ ಪರಿಷತ್ ಇಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಖಾನ್‌ತ್ರಯರ ಚಲನಚಿತ್ರಗಳ ಪೋಸ್ಟರ್ಗಳನ್ನು ಹರಿದು ಸುಟ್ಟು ಹಾಕಿ ಎಂದು ಬಜರಂಗದಳದ ಪ್ರತಿಯೊಬ್ಬ ಸದಸ್ಯರಲ್ಲೂ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.
ತಮ್ಮ ಚಲನಚಿತ್ರಗಳ ಮೂಲಕ ಬಾಲಿವುಡ್ ತಾರೆಗಳಾದ ಶಾರುಕ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಅವರು ಹಿಂಸಾ ಸಂಸ್ಕೃತಿ ಹರಡುತ್ತಿದ್ದಾರೆ. ಹೀಗಾಗಿ ಅವರನ್ನು ಮಾದರಿಯಾಗಿಟ್ಟುಕೊಳ್ಳಬೇಡಿ ಎಂದು ಸಾಧ್ವಿ ಪ್ರಾಚಿ ಯುವಜನರಿಗೆ ಕಿವಿಮಾತು ಹೇಳಿದ್ದಾರೆ.
‘ನೀನೇನಾಗಬೇಕು ಎಂದು ಬಾಲಕನೊಬ್ಬನನ್ನು ಮೀರಠ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಳಿದ್ದೆ. ಆತ ತಾನು ಹೃತಿಕ್ ರೋಷನ್, ಶಾರುಕ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್‌ರಂತೆ ಆಗಬೇಕು ಎಂದು ಹೇಳಿದ. ಅವರಂತೆಯೇ ಏಕೆ ಎಂದು ಕೇಳಿದಾಗ, ಚಿತ್ರಗಳಲ್ಲಿ ಅವರ ಹೊಡೆದಾಟ (ಸ್ಟಂಟ್) ಚೆನ್ನಾಗಿರುತ್ತದೆ ಎಂದು ಬಾಲಕನ ತಾಯಿ ಉತ್ತರಿಸಿದರು’ ಎಂದರು.
ಇಂತಹ ಚಿತ್ರಗಳ ಮೂಲಕ ಅವರು ಹಿಂಸಾ ಸಂಸ್ಕೃತಿಯನ್ನು ಹರಡುತ್ತಿದ್ದಾರೆ. ಹೀಗಾಗಿ ಯುವಜನತೆ ಇವರನ್ನು ತಮ್ಮ ಮಾದರಿಯಾಗಿಟ್ಟುಕೊಳ್ಳಬಾರದು ಎಂದು ಸಾಧ್ವಿ ಕಿವಿಮಾತು ಹೇಳಿದ್ದಾರೆ.
ನಟಿಯರ ವಿರುದ್ಧ ಪಿತೂರಿ
‘ಖಾನ್‌ಗಳು ಹಿಂದೂ ನಟಿಯರಿಗೆ ಆಮಿಷವೊಡ್ಡಿ ಅವರ ವಿರುದ್ಧವೇ ಪಿತೂರಿ ಮಾಡಿದ್ದಾರೆ. ಸಂಗೀತಾ ಬಿಜಲಾನಿ ಜತೆ ಸಲ್ಮಾನ್ ಖಾನ್ ಸಂಬಂಧವಿಟ್ಟುಕೊಂಡಿದ್ದರು. ಮಲೈಕಾ ಅರೋರಾ ಅವರು ಸಲ್ಮಾನ್ ಖಾನ್ ಸಹೋದರನ ಪತ್ನಿ, ಅಮೀರ್ ಖಾನ್ ಮಾಜಿ ಪತ್ನಿ ರೀನಾ ದತ್ತ ಇಲ್ಲವೇ ಈಗಿನ ಪತ್ನಿ ಕಿರಣ್ ರಾವ್ ಎಲ್ಲರೂ ಹಿಂದೂಗಳು. ಇವರೆಲ್ಲ ಯಾಕೆ ಹಿಂದೂ ಗಳನ್ನೇ ಆಯ್ಕೆ ಮಾಡಿಕೊಂಡರು. ಯಾಕೆ ಮುಸ್ಲಿಂ ಯುವತಿಯರ ಜತೆ ಸಂಬಂಧ ಹೊಂದಿರಲಿಲ್ಲ’ ಎಂದು ಸಾಧ್ವಿ ಪ್ರಶ್ನಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.