ADVERTISEMENT

ಖಾಸಗಿ ಸಹಭಾಗಿತ್ವದಲ್ಲಿ ಪಿಎಸ್‌ಎಲ್‌ವಿ ರಾಕೆಟ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ದೇಶದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಉಪಗ್ರಹ ವಾಹಕಗಳ (ರಾಕೆಟ್) ನಿರ್ಮಾಣ ಹೊಣೆಯನ್ನು ಖಾಸಗಿ ಉದ್ಯಮಗಳಿಗೆ ವಹಿಸಿಕೊಡಲು ನಿರ್ಧರಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಘೋಷಿಸಿದೆ.

ಮುಂದಿನ ಐದು ವರ್ಷಗಳಲ್ಲಿ ಖಾಸಗಿಯಾಗಿ ನಿರ್ಮಿಸಿದ ಪಿಎಸ್‌ಎಲ್‌ವಿ ಉಪಗ್ರಹ ವಾಹಕಗಳನ್ನೇ ಉಪಗ್ರಹ ಉಡಾವಣೆಗೆ ಬಳಸಿಕೊಳ್ಳಲಾಗುವುದು ಎಂದು ಇಸ್ರೊ ಅಧ್ಯಕ್ಷ ಕೆ. ರಾಧಾಕೃಷ್ಣನ್ ತಿಳಿಸಿದರು.

ಯೋಜನೆ ಅನುಷ್ಠಾನ ಮತ್ತು ರೂಪುರೇಷೆ ಸಿದ್ಧಪಡಿಸಲು ರಾಷ್ಟ್ರೀಯ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು. ತಂತ್ರಜ್ಞಾನ ವಿನಿಮಯ ಮತ್ತು ಹಣಕಾಸು ವ್ಯವಹಾರ ಹಾಗೂ ಇತರ ವಿಷಯಗಳ ಕುರಿತು ನಿರ್ಣಯ ಕೈಗೊಳ್ಳಲಿದೆ ಎಂದು ಅವರು ಹೇಳಿದರು.

ಬರುವ ಜನವರಿ ತಿಂಗಳು ಅಹಮದಾಬಾದ್‌ನಲ್ಲಿ ನಡೆಯಲಿರುವ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಪಿಎಸ್‌ಎಲ್‌ವಿ ಮತ್ತು ಇತರ ಉಪಗ್ರಹ ವಾಹಕಗಳ ನಿರ್ಮಾಣದಲ್ಲಿ ಖಾಸಗಿ ಸಹಭಾಗಿತ್ವ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು. ಉಪಗ್ರಹ ವಾಹಕ ನಿರ್ಮಾಣದಲ್ಲಿ ಶೇ 80ರಷ್ಟು ಖಾಸಗಿ ಸಹಭಾಗಿತ್ವ ಇರುತ್ತದೆ.

ಇಸ್ರೊ ವಿಜ್ಞಾನಿಗಳು ಸಂಶೋಧನೆ ಮತ್ತು ಶೈಕ್ಷಣಿಕ ಚಟುವಟಿಕೆಗಳತ್ತ ಗಮನ ಹರಿಸಲು ಇದು ನೆರವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.