ನವದೆಹಲಿ: ರಾಷ್ಟ್ರೀಯ ನದಿ ಗಂಗಾ ಮಸೂದೆ 2017ರ (ಪುನರುಜ್ಜೀವನ, ಸಂರಕ್ಷಣೆ ಮತ್ತು ನಿರ್ವಹಣೆ) ಅಂಶಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ರಚಿಸಿದ್ದ ತಜ್ಞರ ಸಮಿತಿಯ ಮೊದಲ ಸಭೆ ಸೋಮವಾರ ನಡೆಯಿತು.
ಗಂಗಾ ನದಿ ಶುದ್ಧೀಕರಣ ರಾಷ್ಟ್ರೀಯ ಮಿಷನ್‌ನ (ಎನ್‌ಎಂಸಿಜಿ) ನಿರ್ದೇಶಕ ಜನರಲ್ ಯು.ಪಿ. ಸಿಂಗ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತಪ್ಪಿತಸ್ಥರಿಗೆ ದಂಡ, ಜೈಲು ಶಿಕ್ಷೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಯಿತು ಎಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯ ತಿಳಿಸಿದೆ.
ಸಮಿತಿ ಸದಸ್ಯರಾದ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ಕುಂಡು, ಮಧ್ಯಪ್ರದೇಶ ಅಡ್ವೊಕೇಟ್ ಜನರಲ್ ಪುರುಷಿಂದ್ರ ಕೌರವ್ ಮತ್ತು ಅಲಹಾಬಾದ್ ಹೈಕೋರ್ಟ್‌ನ ವಕೀಲ ಅರುಣ್ ಕುಮಾರ್ ಗುಪ್ತಾ ಅವರು ಸಭೆಯಲ್ಲಿ ಹಾಜರಿದ್ದರು.
ನದಿಯಲ್ಲಿ ಎಲೆಕ್ಟ್ರಾನಿಕ್ ತಾಜ್ಯದ ಅಡೆತಡೆಯಿಲ್ಲದ ಹರಿವು ಹಾಗೂ ನದಿಯ ಸ್ವಚ್ಛತೆಯಂತಹ ಗಂಭೀರ ವಿಷಯಗಳನ್ನು ಮಸೂದೆ ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.
ಗಂಗಾ ನದಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್, ವಿವಿಧ ಹೈಕೋರ್ಟ್‌ಗಳು ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗಳ ಅದೇಶಗಳನ್ನು ಗಮನದಲ್ಲಿಟ್ಟುಕೊಂಡು ಮಸೂದೆಯ ಕರಡು ಸಿದ್ಧಪಡಿಸಲಾಗಿದೆ.
2016ರ ಜುಲೈನಲ್ಲಿ ರಚನೆಯಾದ ನ್ಯಾಯಮೂರ್ತಿ ಗಿರಿಧರ್ ಮಾಳವೀಯ ನೇತೃತ್ವದ ಸಮಿತಿಯು ಕರಡು ಮಸೂದೆಯನ್ನು ಸಿದ್ಧಪಡಿಸಿತ್ತು. ಇದನ್ನು 2017ರ ಏಪ್ರಿಲ್ 17ರಂದು ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.