ADVERTISEMENT

ಗಜಲ್ ಮಾಂತ್ರಿಕ ಜಗಜಿತ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಮುಂಬೈ, (ಪಿಟಿಐ): ಕೆಲವು ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ಪ್ರಸಿದ್ಧ ಗಜಲ್ ಗಾಯಕ ಜಗಜಿತ್ ಸಿಂಗ್ ಸೋಮವಾರ ಬೆಳಿಗ್ಗೆ ಮಿದುಳಿನ ರಕ್ತಸ್ರಾವದಿಂದ ಕೊನೆಯುಸಿರೆಳೆದರು.

ಗಜಲ್ ಹಾಡುಗಾರಿಕೆಗೆ ಹೊಸ ಆಯಾಮ ನೀಡಿದ್ದ 70 ವರ್ಷದ ಅವರನ್ನು ಸೆ. 23ರಂದು ಇಲ್ಲಿನ ಲೀಲಾವತಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಂದಿನಿಂದಲೂ ಅರೆ ಪ್ರಜ್ಞಾವಸ್ಥೆ ಸ್ಥಿತಿಗೆ ಜಾರಿದ್ದ ಅವರಿಗೆ ಶಸ್ತ್ರಚಿಕಿತ್ಸೆಯ ನಂತರವೂ ಪ್ರಜ್ಞೆ ಮರಳಿರಲಿಲ್ಲ. ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಾರಣ ಕೃತಕ ಉಸಿರಾಟದ ವ್ಯವಸ್ಥೆ ಅಳವಡಿಸಲಾಗಿತ್ತು.

ಮಾತುಂಗದ ಷಣ್ಮುಖಾನಂದ ಸಭಾಂಗಣದಲ್ಲಿ ಕಾರ್ಯಕ್ರಮ ನೀಡಬೇಕಾಗಿದ್ದ ಅವರು ಅಂದೇ ಆಸ್ಪತ್ರೆ ಸೇರಿದ್ದರು. ಹೀಗಾಗಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿತ್ತು.

ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಸಿಂಗ್ ಮೂಲತಃ ರಾಜಸ್ತಾನದ ಗಂಗಾ ನಗರದವರಾದರೂ, ನೆಲೆ ಕಂಡುಕೊಂಡಿದ್ದು ಮಾತ್ರ ವಾಣಿಜ್ಯ ನಗರಿ ಮುಂಬೈನಲ್ಲಿ. ತಮ್ಮದೇ ವಿಶಿಷ್ಟ ಹಾಗೂ ವಿಭಿನ್ನ ಶೈಲಿಯ ಗಜಲ್ ಹಾಡುಗಾರಿಕೆ ಮೂಲಕ ಅವರು ಪ್ರಸಿದ್ಧಿಯಾಗಿದ್ದರು.
 
ಹಿಂದಿ, ಪಂಜಾಬಿ, ಬಂಗಾಳಿ, ಗುಜರಾತಿ, ನೇಪಾಳಿ ಸೇರಿದಂತೆ ಅನೇಕ ಭಾಷೆಗಳಲ್ಲಿ ಗಜಲ್ ಹಾಗೂ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅವರ ಪತ್ನಿ ಚಿತ್ರಾ ಕೂಡ ಗಾಯಕಿ. 18 ವರ್ಷದ ಅವರ ಏಕೈಕ ಪುತ್ರ ವಿವೇಕ್ 1990ರಲ್ಲಿ ಕಾರು ಅಪಘಾತದಲ್ಲಿ ಮೃತಪಟ್ಟಿದ್ದ.

`ಜುಕಿ ಜುಕಿ ಸಿ ನಜರ್...~, `ಯೇ ಕಾಗಜ್ ಕಿ ಕಷ್ಟಿ...~ `ಹಜಾಂರೋಂ ಕ್ವಾಯಿಶೆ ಐಸಿ...~, `ಸರಕ್ತಿ ಜಾಯೆ ಹೈ ರುಕಾ ಸೇ ನಕಾಬ್ ಆಹಿಸ್ತಾ..~ಗಳಂತಹ ನೂರಾರು ಗಜಲ್‌ಗಳು ಅವರ ಕಂಠ ಮಾಧುರ್ಯದಲ್ಲಿ ಹೊರಹೊಮ್ಮಿವೆ. ಅಮೀರ್ ಖಾನ್ ಮತ್ತು ಸೋನಾಲಿ ಬೇಂದ್ರೆ ಅಭಿನಯದ ಸರ್ಫರೋಶ್ ಸೇರಿದಂತೆ ಅನೇಕ ಹಿಂದಿ ಚಿತ್ರಗಳಲ್ಲಿ ಅವರ ಕಂಠಸಿರಿ ಪ್ರಸಿದ್ಧವಾಗಿದೆ.

ಮರೈನ್ ಲೈನ್ಸ್‌ನಲ್ಲಿರುವ ಚಂದನವಾಡಿ ಚಿತಾಗಾರದಲ್ಲಿ ಮಂಗಳವಾರ ಸಂಜೆ 4.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಆಪ್ತ ಕುಲದೀಪ್ ದೇಸಾಯಿ ತಿಳಿಸಿದ್ದಾರೆ. 

ಗಾಯಕಿರಾದ ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಶುಭಾ ಮುದ್ಗಲ್, ಉಷಾ ಉತ್ತುಪ್, ಮತ್ತೊಬ್ಬ ಪ್ರಸಿದ್ಧ ಗಜಲ್ ಗಾಯಕ ಪಂಕಜ್ ಉದಾಸ್, ಗೀತ ರಚನೆಕಾರ ಜಾವೇದ್ ಅಖ್ತರ್ ಅವರು ಜಗಜಿತ್ ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಅವರೊಬ್ಬ ಪ್ರತಿಭಾವಂತ ಗಾಯಕ. ಗಜಲ್ ಹಾಡುಗಾರಿಕೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಗಜಲ್‌ಗಳಿಗೆ ಮತ್ತೊಂದು ಹೆಸರೇ ಜಗಜಿತ್ ಸಿಂಗ್ ಎಂದಾಗಿತ್ತು. ಅವರ ಹೃದಯದಿಂದ ಹೊರಹೊಮ್ಮುತ್ತಿದ್ದ ಗಜಲ್‌ಗಳನ್ನು ಆಸ್ವಾದಿಸುವುದೇ ಒಂದು ಆನಂದ. ಅದರಿಂದ ಮನಸ್ಸು ಶಾಂತವಾಗುತ್ತಿತ್ತು. ಹೃದಯ ಹಗುರಾಗುತ್ತಿತ್ತು. ಜನಸಾಮಾನ್ಯರಿಗೂ ಗಜಲ್ ಅರ್ಥವಾಗಿದ್ದು ಜಗಜಿತ್ ಕಂಠದಿಂದ ಎಂದು ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಗಜಲ್ ಸಂಗೀತದಲ್ಲಿ ಸದಾ ಹೊಸತನವನ್ನು ಕೊಡಬೇಕು ಎಂಬ ಹಂಬಲಿಸುತ್ತಿದ್ದ ಜಗಜಿತ್ ಈ ಕ್ಷೇತ್ರದಲ್ಲಿ ಮೊದಲ ಬಾರಿಗೆ 12 ತಂತಿಗಳ ಗಿಟಾರ್ ಮತ್ತು ಬಾಸ್ ಗಿಟಾರ್ ಉಪಯೋಗಿಸಿದರು. ಎಲ್ಲಕ್ಕಿಂತಲೂ ಹೆಚ್ಚಾಗಿ ಅವರೊಬ್ಬ ಮಹಾ ಮಾನವತಾವಾದಿಯಾಗಿದ್ದರು ಎಂದು  ಉಷಾ ಉತ್ತುಪ್ ಕಂಬನಿ ಮಿಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.