ADVERTISEMENT

ಗಡಿಯಲ್ಲಿ ಯೋಧರ ಸಂಖ್ಯೆ ಹೆಚ್ಚಳ

ಟಿಬೆಟ್‌ ಬಳಿ ಗಸ್ತು ವ್ಯವಸ್ಥೆ ಬಲವರ್ಧನೆಗೆ ಭಾರತದ ಕ್ರಮ

ಪಿಟಿಐ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಗಡಿಯಲ್ಲಿ ಯೋಧರ ಸಂಖ್ಯೆ ಹೆಚ್ಚಳ
ಗಡಿಯಲ್ಲಿ ಯೋಧರ ಸಂಖ್ಯೆ ಹೆಚ್ಚಳ   

ಕಿಬಿಥು (ಅರುಣಾಚಲ ಪ್ರದೇಶ): ಚೀನಾದ ಗಡಿಗೆ ಹೊಂದಿಕೊಂಡಿರುವ ಟಿಬೆಟ್‌ ಮತ್ತು ಅರುಣಾಚಲ ಪರ್ವತ ಪ್ರದೇಶಗಳಲ್ಲಿ ಭಾರತೀಯ ಯೋಧರ ಜಮಾವಣೆ ಹೆಚ್ಚುತ್ತಿದೆ.

ಇದರೊಂದಿಗೆ ಚೀನಾ ಸೇನೆಯ ಚಟುವಟಿಕೆಗಳ ಮೇಲೆ ಕಣ್ಣಿಡಲು ಗಸ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಲಾಗಿದೆ.

ದೋಕಲಾ ಸಂಘರ್ಷದ ನಂತರ ಚೀನಾ–ಟಿಬೆಟ್‌ ಗಡಿಯಲ್ಲಿರುವ ದಿಬಾಂಗ್‌, ದೌ ದೆಲೈ ಮತ್ತು ಲೊಹಿತ್‌ ಕಣಿವೆಗಳಲ್ಲಿ ಭಾರತೀಯ ಸೇನೆಯ ಹೆಲಿಕಾಪ್ಟರ್‌ಗಳು ನಿರಂತರ ಹಾರಾಟ ನಡೆಸುತ್ತಿವೆ.

ADVERTISEMENT

‘ಭಾರತ, ಚೀನಾ ಮತ್ತು ಮ್ಯಾನ್ಮಾರ್‌ ನಡುವಿರುವ ತ್ರಿಸಂಧಿ ಸೇರಿದಂತೆ ಗಡಿಯಲ್ಲಿರುವ ಎಲ್ಲ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯ ಕಣ್ಗಾವಲು ವ್ಯವಸ್ಥೆ ಚುರುಕುಗೊಳ್ಳಲಿದೆ. ಗಡಿಯಲ್ಲಿ ಚೀನಾ ಸೇನೆಯ ರಸ್ತೆ ನಿರ್ಮಾಣ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶ ನಮ್ಮದಾಗಿದೆ’ ಹೆಸರು ಹೇಳಲಿಚ್ಛಿಸದ ಸೇನಾಧಿಕಾರಿ ತಿಳಿಸಿದ್ದಾರೆ.

‘ದೀರ್ಘಾವಧಿ ಗಸ್ತು ವ್ಯವಸ್ಥೆ’ ಅಡಿ 15ರಿಂದ 30 ದಿನ ಸಣ್ಣ ಗುಂಪುಗಳು ಪಾಳಿಯ ಮೇಲೆ ಗಡಿ ನಿಯಂತ್ರಣ ರೇಖೆಯ ಬಳಿ ಕಾವಲು ಕಾಯಲಿವೆ ಎಂದು ಅವರು ತಿಳಿಸಿದ್ದಾರೆ.

ಭಾರತದೊಂದಿಗೆ ನೆರೆಯ ಚೀನಾ ನಾಲ್ಕು ಸಾವಿರ ಕಿ.ಮೀಗಡಿಯನ್ನು ಹಂಚಿಕೊಂಡಿದೆ. ಚೀನಾ ಇಲ್ಲಿ ರಸ್ತೆ, ಹೆಲಿಪ್ಯಾಡ್‌, ಅಡಗುತಾಣ, ಗಡಿಠಾಣೆ ಸೇರಿದಂತೆ ಮೂಲಸೌಲಭ್ಯ ಮುಂತಾದ ವ್ಯವಸ್ಥೆಯನ್ನು ಉತ್ತಮಪಡಿಸಿಕೊಳ್ಳಲು ಯತ್ನಿಸುತ್ತಿದೆ.

ಪಾಕ್‌ಗಿಂತ ಚೀನಾ ಗಡಿ ಹೆಚ್ಚು ತ್ವೇಷಮಯ
ದೋಕಲಾ ಬಿಕ್ಕಟ್ಟಿನ ನಂತರ ಭಾರತವು ನೆರೆಯ ಪಾಕಿಸ್ತಾನದ ಗಡಿಗಿಂತ ಚೀನಾ ಗಡಿಯತ್ತ ಹೆಚ್ಚು ಗಮನ ಹರಿಸಿದೆ ಎಂದು ಕಿಬಿಥು ಗಡಿಯಲ್ಲಿ ನಿಯೋಜಿಸಲಾಗಿರುವ ಸೇನಾಧಿಕಾರಿಗಳು ತಿಳಿಸಿದ್ದಾರೆ.

ಭಾರತ–ಪಾಕಿಸ್ತಾನ ಗಡಿಗಿಂತ ಭಾರತ–ಚೀನಾ ಗಡಿಯಲ್ಲಿ ಹೆಚ್ಚು ತ್ವೇಷಮಯ ಪರಿಸ್ಥಿತಿ ಇದೆ. ದೋಕಲಾದ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ಚೀನಾ ಚಟುವಟಿಕೆಗಳು ಹೆಚ್ಚಿವೆ. ಹಾಗಾಗಿ ಭಾರತದ ಸೇನೆಯ ಜಮಾವಣೆ ಅನಿವಾರ್ಯ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

*
ಹಿಮದಿಂದ ಆವೃತ್ತವಾಗಿರುವ ಗಡಿಯಲ್ಲಿ ಎಂತಹ ಸವಾಲು ಎದುರಾದರೂ ಸಮರ್ಥವಾಗಿ ಮೆಟ್ಟಿ ನಿಲ್ಲಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ.
–ಭಾರತೀಯ ಸೇನಾಧಿಕಾರಿ, ಕಿಬಿಥು ಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.