ADVERTISEMENT

ಗಡ್ಕರಿಗೆ ಇನ್ನೊಂದು ಗಂಡಾಂತರ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2012, 19:30 IST
Last Updated 5 ನವೆಂಬರ್ 2012, 19:30 IST

ನವದೆಹಲಿ (ಐಎಎನ್‌ಎಸ್): ಸ್ವಾಮಿ ವಿವೇಕಾನಂದ ಹಾಗೂ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ `ಬುದ್ಧಿ ಮಟ್ಟ~ ಹೋಲಿಸುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮತ್ತೊಂದು ಹೊಸ ವಿವಾದಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ.

`ನಾನು ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದಾಗಿ~ ಸೋಮವಾರ ಗಡ್ಕರಿ ಸಮರ್ಥಿಸಿಕೊಂಡಿದ್ದರೂ, ಅವರ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಕೋಲಾಹಕ್ಕೆ ಕಾರಣವಾಗಿದೆ. ಈ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಘಟನೆ ವಿವರ: ಭೋಪಾಲ್‌ನಲ್ಲಿ ಭಾನುವಾರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ತಮ್ಮ ಭಾಷಣದಲ್ಲಿ `ಒಬ್ಬ ವ್ಯಕ್ತಿಯ ಬುದ್ಧಿ ಶಕ್ತಿಯನ್ನು ಅವರವರ ಮಾನಸಿಕ ಶಕ್ತಿಯ ಮೇಲೆ ಅಳೆಯಲಾಗುತ್ತದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.

ಏಕೆಂದರೆ ಅವರು ಬುದ್ಧಿಶಕ್ತಿಯನ್ನು ಯಾವ ಉದ್ದೇಶಕ್ಕಾಗಿ ಬಳಸುತ್ತಾರೆ ಎಂಬುದರ ಮೇಲೆ ಅದನ್ನು ಅಳೆಯಬಹುದಾಗಿದೆ. ಸ್ವಾಮಿ ವಿವೇಕಾನಂದ ಹಾಗೂ ದಾವೂದ್ ಇಬ್ರಾಹಿಂ ಬುದ್ಧಿಶಕ್ತಿಯನ್ನೇ ಹೋಲಿಸಿ ನೋಡಿ. ಇಬ್ಬರ ಬುದ್ಧಿಶಕ್ತಿ ಬಹುತೇಕ ಒಂದೇ ಮಟ್ಟದಲ್ಲಿದೆ. ಆದರೆ, ಅವರಿಬ್ಬರೂ ಆ ಶಕ್ತಿಯನ್ನು ಬೇರೆ ಬೇರೆ ಕ್ಷೇತ್ರಗಳ `ಅಭಿವೃದ್ಧಿಗೆ~ ಬಳಸಿದ್ದಾರೆ.

ವಿವೇಕಾನಂದರು ರಾಷ್ಟ್ರ ನಿರ್ಮಾಣ, ಧರ್ಮ ಸ್ಥಾಪನೆಯಂತಹ ಉತ್ತಮ ಕಾರ್ಯಗಳಿಗೆ ಬಳಸಿದರೆ, ದಾವೂದ್ ಇಬ್ರಾಹಿಂ ಅಪರಾಧ ಜಗತ್ತಿನ ಚಟುವಟಿಕೆ ಹಾಗೂ ವಿಧ್ವಂಸಕ ಕೃತ್ಯಗಳಿಗೆ ಬಳಸಿದ್ದಾನೆ~ ಎಂದು ಹೋಲಿಕೆ ನೀಡಿದ್ದರು.

ಗಡ್ಕರಿ ಅವರು ಭಾಷಣ ಮುಗಿಸಿ ವೇದಿಕೆಯಿಂದ ಇಳಿಯುತ್ತಿದ್ದಂತೆ ಅವರನ್ನು ಸುತ್ತುವರಿದ ಸುದ್ದಿಗಾರರು `ಹೋಲಿಕೆ~ ಹೇಳಿಕೆ ಕುರಿತು ಪ್ರಶ್ನಿಸಿದಾಗ, `ನಾನು ಹಾಗೆ ಯಾವುದೇ ಹೋಲಿಕೆಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು, ಒಬ್ಬ ವ್ಯಕ್ತಿ ತನ್ನ ಬುದ್ಧಿಶಕ್ತಿಯನ್ನು ಕೆಲವೊಮ್ಮೆ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುತ್ತಾನೆ. ಮತ್ತೊಬ್ಬ ಬುದ್ಧಿಶಕ್ತಿ ಬಳಸಿಕೊಂಡು ದಾವೂದ್‌ನಂತೆ ಆಗಬಹುದೆಂದು ಹೇಳ್ದ್ದಿದೇನೆ~ ಎಂದು ಸಮರ್ಥಿಸಿಕೊಂಡರು. ಕೊನೆಯಲ್ಲಿ `ನಾನು ಬಾಯ್ತಪ್ಪಿ ಹಾಗೆ ಹೇಳಿಕೆ ನೀಡಿರಬಹುದು~ ಎಂದೂ ನುಣುಚಿಕೊಂಡಿದ್ದರು.

ಖಂಡನೆ: ಗಡ್ಕರಿ ಅವರ ವಿವಾದಾತ್ಮಕ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. `ಇದು ಬಿಜೆಪಿ ಸಂಸ್ಕೃತಿ ಮತ್ತು ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ~ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ, ವ್ಯಂಗ್ಯವಾಡಿದ್ದಾರೆ. `ಬಿಜೆಪಿಯು ಈ ಹೇಳಿಕೆಗೆ ಸ್ಪಷ್ಟನೆ ನೀಡಬೇಕು. ದೇಶದ ಕ್ಷಮೆಯಾಚಿಸಬೇಕು~ ಎಂದೂ ತಿವಾರಿ ಆಗ್ರಹಿಸಿದ್ದಾರೆ.

ಆದರೆ, ಗಡ್ಕರಿ ಅವರ ಹೇಳಿಕೆ ಕುರಿತು ಬಿಜೆಪಿ ನಾಯಕರು ವಿವರಣೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ನಾಯಕ ಬಲಬೀರ್ ಪಂಜ್ ಅವರು, `ಗಡ್ಕರಿ ಅವರು ವಿವೇಕಾನಂದ - ದಾವೂದ್ ಇಬ್ರಾಹಿಂ~ ಅವರನ್ನು ಹೋಲಿಕೆ ಮಾಡಿಲ್ಲ. ಬುದ್ಧಿವಂತಿಕೆ ಮತ್ತು ಹಣವನ್ನು ಉತ್ತಮ ಹಾಗೂ ಕೆಟ್ಟಕೆಲಸಗಳಿಗೆ ಎರಡಕ್ಕೂ ಬಳಸಬಹುದೆಂಬ ಅರ್ಥ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ~ ಎಂದು ಸಮರ್ಥಿಸಿಕೊಂಡಿದ್ದಾರೆ.

ಮಹೇಶ್ ಜೇಠ್ಮಲಾನಿ ರಾಜೀನಾಮೆ
ನವದೆಹಲಿ/ಮುಂಬೈ(ಪಿಟಿಐ): ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಜೀನಾಮೆಗೆ ಒತ್ತಾಯಿಸಿ ವಕೀಲ ಮಹೇಶ್ ಜೇಠ್ಮಲಾನಿ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ.

`ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ನಿಮ್ಮ ಅಧ್ಯಕ್ಷತೆಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯನಾಗಿ ಮುಂದುವರಿಯಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ. ಹಾಗೆ ಮುಂದುವರಿಯುವುದು ಸೂಕ್ತವೂ ಅಲ್ಲ. ಹಾಗಾಗಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ~ ಎಂದು ಮಹೇಶ್, ಗಡ್ಕರಿಅವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಹೇಶ್, `ಭ್ರಷ್ಟಾಚಾರ ಆರೋಪ ಕುರಿತು ತಾನು ಕೇಳಿರುವ ಪ್ರಶ್ನೆಗಳಿಗೆ ಗಡ್ಕರಿ ನೀಡಿದ ಉತ್ತರ ಸಮರ್ಪಕವಾಗಿಲ್ಲ. ಹಾಗಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಆದರೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ~ ಎಂದು ತಿಳಿಸಿದ್ದಾರೆ.

ಖ್ಯಾತ ವಕೀಲ ರಾಜ್ಯಸಭಾ ಸದಸ್ಯ ರಾಮ್ ಜೇಠ್ಮಲಾನಿ ಅವರು ಎರಡನೇ ಅವಧಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯದಂತೆ ಗಡ್ಕರಿಯನ್ನು ಒತ್ತಾಯಿಸಿದ ಹದಿನೈದು ದಿನಗಳ ನಂತರ ಪುತ್ರ ಮಹೇಶ್ ಜೇಠ್ಮಲಾನಿ ಕಾರ್ಯಕಾರಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.