ADVERTISEMENT

ಗಡ್ಕರಿ ಮಾನಹಾನಿ ಪ್ರಕರಣ: ದಿಗ್ವಿಜಯಸಿಂಗ್‌ಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:35 IST
Last Updated 21 ಡಿಸೆಂಬರ್ 2012, 8:35 IST

ನವದೆಹಲಿ (ಐಎಎನ್‌ಎಸ್): ಬಿಜೆಪಿ ಅಧ್ಯಕ್ಷ ನಿತಿನ್‌ಗಡ್ಕರಿ ಅವರು ಹೂಡಿರುವ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಾಂಗ್ರೆಸ್ ನಾಯಕ ದಿಗ್ವಿಜಯಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಆದರೆ ಪ್ರಕರಣದ ವಿಚಾರಣೆಯಲ್ಲಿ ವೈಯಕ್ತಿಕವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಲು ನಿರಾಕರಿಸಿದೆ. 

 
ದಿಗ್ವಿಜಯಸಿಂಗ್ ಅವರು ತಮ್ಮ ಮೇಲೆ ಮಾಡಿರುವ ಕಲ್ಲಿದ್ದಲು ಹಗರಣದ ಆರೋಪವು ಆಧಾರರಹಿತ ಎಂದು ಹೇಳಿರುವ ಗಡ್ಕರಿ ಅಕ್ಟೋಬರ್ 1 ರಂದು ಇಲ್ಲಿನ ನ್ಯಾಯಾಲಯದಲ್ಲಿ ಮಾನನಷ್ಟ  ಪ್ರಕರಣ ಹೂಡಿದ್ದರು. 
 
ಪ್ರಕರಣದ ವಿಚಾರಣೆ ಸಮಯದಲ್ಲಿ ಹಾಜರಿದ್ದ ದಿಗ್ವಿಜಯಸಿಂಗ್ ಅವರಿಗೆ ನ್ಯಾಯಾಧೀಶರು 50 ಸಾವಿರ ರೂ ಭದ್ರತಾ ಠೇವಣಿ ನೀಡುವಂತೆ ಸೂಚಿಸಿ ಜಾಮೀನು ಮಂಜೂರು ಮಾಡಿದರು. ಮುಂದಿನ ವಿಚಾರಣೆಯನ್ನು ಜನವರಿ 31, 2013ಕ್ಕೆ ನಿಗದಿಪಡಿಸಲಾಗಿದೆ.
 
ಕೋರ್ಟ್ ವಿಚಾರಣೆ ನಂತರ ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದ ದಿಗ್ವಿಜಯಸಿಂಗ್ ಅವರು ತಮಗೂ ಗಡ್ಕರಿ  ಅವರಿಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ. ಆದರೆ ಭ್ರಷ್ಟಾಚಾರದ ವಿರುದ್ದ ಮಾತನಾಡುತ್ತಿರುವ ಬಿಜೆಪಿ ಪಕ್ಷದ ಅಧ್ಯಕ್ಷರೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ. ನಿತಿನ್ ಗಡ್ಕರಿ ಒಬ್ಬ ವ್ಯಾಪಾರಿ. ಅವರು ನಕಲಿ ಹೆಸರಿನಲ್ಲಿ ಹಲವು ಕಂಪೆನಿಗಳನ್ನು ಹುಟ್ಟು ಹಾಕಿ ಅಕ್ರಮ ಹಣ ಸಂಪಾದಿಸಿದ್ದಾರೆ. ಈ ಕುರಿತು ಇನ್ನಷ್ಟು ಸಾಕ್ಷಿಗಳನ್ನು ಸಂಗ್ರಹಿಸಿ ಜನತೆಗೆ ತಿಳಿಸುವುದಾಗಿ ಹೇಳಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.