ADVERTISEMENT

ಗಣಿಗಾರಿಕೆ: ಸಿಇಸಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ನವದೆಹಲಿ:ರಾಜ್ಯದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ನಡೆದಿರುವ ಗಣಿಗಾರಿಕೆಯಿಂದ ನಾಶವಾಗಿರುವ ಪರಿಸರ ಪುನರುಜ್ಜೀವನ ಯೋಜನೆ ಜಾರಿಗೆ 30 ವರ್ಷದಲ್ಲಿ 30 ಸಾವಿರ ಕೋಟಿ ಖರ್ಚು ಮಾಡುವಂತೆ ಸುಪ್ರೀಂಕೋರ್ಟ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ ಮಹತ್ವದ ಶಿಫಾರಸು ಮಾಡಿದೆ.

ಕರ್ನಾಟಕದ ಮುಖ್ಯ ಕಾರ್ಯದರ್ಶಿ ನೇತೃತ್ವದ `ವಿಶೇಷ ಸಂಸ್ಥೆ~ (ಎಸ್‌ಪಿವಿ) ಪರಿಸರ ಪುನರುಜ್ಜೀವನ ಯೋಜನೆ ಜಾರಿ ಹೊಣೆಗಾರಿಕೆ ಹೊರಬೇಕು. ಅರಣ್ಯ, ಗಣಿ, ಕಂದಾಯ ಒಳಗೊಂಡಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಈ ಸಂಸ್ಥೆಯಲ್ಲಿರಬೇಕು. 2012-13 ಯೋಜನೆ ಸಿದ್ಧತೆ ವರ್ಷವಾಗಬೇಕು. 2013-14 ಯೋಜನೆ ಜಾರಿ ಮೊದಲ ವರ್ಷವಾಗಬೇಕು. 2043-44 ಕೊನೆಯ ವರ್ಷವಾಗಬೇಕು ಎಂದು ಸಿಇಸಿ ಹೇಳಿದೆ.

ಸಿಇಸಿ ವರದಿಯನ್ನು ಸುಪ್ರೀಂಕೋರ್ಟ್‌ಗೆ ಬುಧವಾರ ಸಲ್ಲಿಸಲಾಗಿದೆ. ಎ ವರ್ಗದ ಗಣಿಗಳ ಅದಿರು ಮಾರಾಟದಿಂದ ಬಂದಿರುವ ಮತ್ತು ಮುಂದೆ ಬರಲಿರುವ ಶೇ 10, ಬಿ. ಗಣಿಗಳ ಶೇ 15 ಹಾಗೂ ಗಣಿ ಗುತ್ತಿಗೆ ರದ್ದಿಗೆ ಶಿಫಾರಸಾಗಿರುವ ಸಿ ವರ್ಗದ ಗಣಿಗಳ ಪೂರ್ಣ ಅದಿರು ಮಾರಾಟದಿಂದ ಬರುವ ಹಣವನ್ನು ಪರಿಸರ ಪುನರುಜ್ಜೀವನ ಯೋಜನೆಗೆ ಬಳಸಿಕೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ.

ಉದ್ದೇಶಿತ ವಿಶೇಷ ಸಂಸ್ಥೆ, ಪರಿಸರ ಪುನರುಜ್ಜೀವನಕ್ಕೆ ರೂಪಿಸಿರುವ ಯೋಜನೆ, ವೆಚ್ಚ ಮತ್ತು ಯೋಜನೆ ಜಾರಿಗೆ ಹಿಡಿಯಲಿರುವ ವರ್ಷ ಎಲ್ಲ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಅನುಮೋದನೆ ಪಡೆಯಬೇಕು. ಗಣಿಗಾರಿಕೆಯಿಂದ ಹಾನಿಗೊಳಗಾದ ಪ್ರದೇಶದ ಸಾಮಾಜಿಕ- ಆರ್ಥಿಕ ಅಭಿವೃದ್ಧಿ, ಮೂಲಸೌಲಭ್ಯ ಅಭಿವೃದ್ಧಿ,

ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಮತ್ತು ಆರೋಗ್ಯ- ಶಿಕ್ಷಣ ಅಭಿವೃದ್ಧಿಗೆ ಒತ್ತು ಕೊಡಬೇಕು. ಯೋಜನೆ ಸರಿಯಾಗಿ ಅನುಷ್ಠಾನವಾಗುತ್ತಿದೆಯೇ ಎಂದು ಪರಿಶೀಲಿಸಲು ಮೇಲುಸ್ತವಾರಿ ವ್ಯವಸ್ಥೆ ಇರಬೇಕೆಂದು ಸಿಇಸಿ ಸಲಹೆ ಮಾಡಿದೆ.

ಅರಣ್ಯ ಪುನರುಜ್ಜೀವನ ಯೋಜನೆ ಜಾರಿ ತ್ವರಿತವಾಗಿ ಹಾಗೂ ಸಮಗ್ರವಾಗಿ ನಡೆಯಬೇಕು. ಯೋಜನೆಯಿಂದ ಇಡೀ ಪ್ರದೇಶ ಪ್ರಗತಿ ಸಾಧ್ಯವಾಗಬೇಕು. ಅದರಿಂದ ಆ ಭಾಗದ ಜನರಿಗೂ ಅನುಕೂಲವಾಗುವಂತೆ ಇರಬೇಕು.

ಇವೆಲ್ಲವೂ ಪಾರದರ್ಶಕವಾಗಿ ನಡೆಯಬೇಕು. ಪಾರದರ್ಶಕ ವಿಧಿವಿಧಾನಗಳ ಮೂಲಕ ಆಯ್ಕೆ ಮಾಡಿದ ಸಂಸ್ಥೆಗಳಿಗೆ ಕೆಲಸಗಳನ್ನು ವಹಿಸಬೇಕು. ಇದಕ್ಕೆ ಖರ್ಚು ಮಾಡುವ ಹಣ ಸೋರಿಕೆಯಾಗದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಯದ್ವಾತದ್ವ ನಡೆದಿರುವ ಅಕ್ರಮ ಗಣಿಗಾರಿಕೆ ಪರಿಣಾಮವಾಗಿ ನಾಶವಾದ ಪರಿಸರ ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಗಣಿ ಗುತ್ತಿಗೆಗಳು ಯಾವುದೇ ಕಾಳಜಿ ತೋರದ ಹಿನ್ನೆಲೆಯಲ್ಲಿ `ವಿಶೇಷ ಸಂಸ್ಥೆ~ ಯೋಜನೆ ರೂಪಿಸಲಾಗಿದೆ.

ಅವೈಜ್ಞಾನಿಕವಾಗಿ, ಅಕ್ರಮವಾಗಿ ನಡೆದಿರುವ ಗಣಿಗಾರಿಕೆಯಿಂದ ಪರಿಸರ, ಆರೋಗ್ಯ, ಕೃಷಿ ಹಾಗೂ ಜನಜೀವನದ ಮೇಲೆ ಆಗಿರುವ ಕೆಟ್ಟ ಪರಿಣಾಮಗಳನ್ನು ಸರಿಪಡಿಸುವ ಯತ್ನವಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಸಿಇಸಿ ಹೇಳಿದೆ.

ನೈಸರ್ಗಿಕ ಸಂಪತ್ತನ್ನು ವ್ಯಾಪಾರ ಉದ್ದೇಶಕ್ಕೆ ಬಳಸುವ ಸಂದರ್ಭದಲ್ಲಿ ಸುತ್ತಮುತ್ತಲ ಪ್ರದೇಶದ ಅಭಿವೃದ್ಧಿ- ಪ್ರಗತಿ ಸಂಬಂಧ ಸುಪ್ರೀಂಕೋರ್ಟ್ ಕಾಲಕಾಲಕ್ಕೆ ಹಲವು ನಿರ್ದೇಶನಗಳನ್ನು ನೀಡಿದೆ. ಇದು ಪರಿಸರದ ದೃಷ್ಟಿಯಿಂದ ಕಾರ್ಯಸಾಧುವಾದ ರೀತಿಯಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಸಹಕಾರಿಯಾಗಿದೆ.

ADVERTISEMENT

ಗಣಿ ಗುತ್ತಿಗೆಯಿಂದ ಬರುವ ಸ್ವಲ್ಪ ಆದಾಯವನ್ನು ಸರ್ಕಾರದ ಖಾತೆಗಳಲ್ಲಿ ಠೇವಣಿ ಇಡುವ ಬದಲು ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆಯಂಥ ಯೋಜನೆಗಳಿಗೆ ಬಳಸುವುದು ಉಚಿತ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.