ADVERTISEMENT

ಗಣಿ ಅಕ್ರಮ: ಇನ್ನಷ್ಟು ಅಧಿಕಾರಿಗಳ ಮೇಲೆ ಸಿಬಿಐ ಕಣ್ಣು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಹೈದರಾಬಾದ್: ಗಾಲಿ ಜನಾರ್ದನ ರೆಡ್ಡಿ ಅವರ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರದ ಇನ್ನಷ್ಟು ಅಧಿಕಾರಿಗಳು ಸಿಬಿಐ ಬಲೆಗೆ ಬೀಳುವ ಎಲ್ಲ ಸಾಧ್ಯತೆಗಳೂ ಕಾಣುತ್ತಿವೆ.

ಅರಣ್ಯ, ಗಣಿಗಾರಿಕೆ ಹಾಗೂ ಸಾರಿಗೆ ಇಲಾಖೆಯಲ್ಲಿ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಐಎಎಸ್ ಅಧಿಕಾರಿಗಳೂ ಸೇರಿದಂತೆ ಹಲವರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಸೋಮವಾರ ಸಿಬಿಐ ಸೂಚನೆ ನೀಡಿದೆ.

ಒಎಂಸಿ ಪ್ರಕರಣದಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ, ಗಾಲಿ ಜನಾರ್ದನ ರೆಡ್ಡಿ ಅವರ ಜೊತೆಗೆ ಗಣಿ ಮಾಜಿ ಕಾರ್ಯದರ್ಶಿ ವೈ.ಶ್ರೀಲಕ್ಷ್ಮಿ, ಆಂಧ್ರಪ್ರದೇಶ ಖನಿಜ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ, ಐಎಎಸ್ ಅಧಿಕಾರಿ ವಿ.ಡಿ.ರಾಜಗೋಪಾಲ್ ಅವರನ್ನೂ ಸಿಬಿಐ ಆರೋಪಿಗಳ ಪಟ್ಟಿಗೆ ಸೇರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಗಣಿ, ಪರಿಸರ ಇಲಾಖೆಯ ಮತ್ತಷ್ಟು ಅಧಿಕಾರಿಗಳನ್ನು ಹೆಸರಿಸಲಾಗುತ್ತದೆ ಎಂದು ಸಿಬಿಐ ಮೂಲಗಳು ಹೇಳಿವೆ. ಈ ಹಿಂದೆ ತನಿಖಾ ತಂಡದ ಅಧಿಕಾರಿಗಳು ಅರಣ್ಯ ಇಲಾಖೆ ಮಾಜಿ ಕಾರ್ಯದರ್ಶಿ (ನಿವೃತ್ತ ಐಎಎಸ್ ಅಧಿಕಾರಿ) ಜಾನಕಿ ಕೊಂಡಲಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು.

ಆಂಧ್ರ ಹಾಗೂ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಗೆ ಸಹಕರಿಸಿದ ಅರಣ್ಯ ಮತ್ತು ಗಣಿ ಇಲಾಖೆಯ ಕೆಲವು ಅಧಿಕಾರಿಗಳನ್ನೂ ಕಳೆದ ವಾರ ಹೈದರಾಬಾದ್ ಹಾಗೂ ಅನಂತಪುರದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ದಿ. ವೈ.ಎಸ್.ರಾಜಶೇಖರ ರೆಡ್ಡಿ ಹಾಗೂ ಕೆ.ರೋಸಯ್ಯ ಅವರ ಅವಧಿಯಲ್ಲಿ ಅನಂತಪುರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ಮತ್ತು ಗಣಿ ಇಲಾಖೆಯ ಕೆಲವು ಅಧಿಕಾರಿಗಳು ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾದ ಬಗ್ಗೆ ಸಾಕ್ಷ್ಯಗಳು ಇವೆ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.