ADVERTISEMENT

‘ಗರ್ಭಿಣಿಯರಿಗೆ ಶಿಫಾರಸು ಅವೈಜ್ಞಾನಿಕ’

ಪಿಟಿಐ
Published 14 ಜೂನ್ 2017, 19:29 IST
Last Updated 14 ಜೂನ್ 2017, 19:29 IST
‘ಗರ್ಭಿಣಿಯರಿಗೆ ಶಿಫಾರಸು ಅವೈಜ್ಞಾನಿಕ’
‘ಗರ್ಭಿಣಿಯರಿಗೆ ಶಿಫಾರಸು ಅವೈಜ್ಞಾನಿಕ’   

ನವದೆಹಲಿ: ಗರ್ಭಿಣಿಯರಿಗೆ ಮಾಂಸ ಆಹಾರ ಸೇವನೆ ಮತ್ತು ಲೈಂಗಿಕ ಕ್ರಿಯೆಯಿಂದ ದೂರವಿರುವಂತೆ ಆಯುಷ್‌ ಸಚಿವಾಲಯ ಮಾಡಿದ ಶಿಫಾರಸುಗಳನ್ನು ‘ವಿವೇಚನಾರಹಿತ ಮತ್ತು ಅವೈಜ್ಞಾನಿಕ’ ಎಂದು ಅಲೋಪಥಿ ವೈದ್ಯರು ಟೀಕಿಸಿದ್ದಾರೆ.

ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಪ್ರೊಟೀನ್‌, ಕಬ್ಬಿಣಾಂಶ ಹಾಗೂ ಇನ್ನಿತರ ಪೌಷ್ಠಿಕಾಂಶ ಯಥೇಚ್ಛವಾಗಿರುವ ಮೊಟ್ಟೆ, ಮೀನು ಮತ್ತು ಮಾಂಸಾಹಾರ ಸೇವಿಸುವಂತೆ ಗರ್ಭಿಣಿಯರಿಗೆ ಸಲಹೆ ಮಾಡಲಾಗುತ್ತದೆ ಎಂದು ದೆಹಲಿಯ ಫೋರ್ಟಿಸ್‌ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.

ಆರೋಗ್ಯವಂತ ಮಗುವಿಗಾಗಿ ಗರ್ಭಿಣಿಯರು ಮಾಂಸಾಹಾರ ಮತ್ತು ಲೈಂಗಿಕ ಕ್ರಿಯೆ ತ್ಯಜ್ಯಿಸುವಂತೆ ಕೆಂದ್ರೀಯ ಯೋಗ ಸಂಶೋಧನಾ ಸಮಿತಿ ಪ್ರಕಟಿಸಿದ ಕಿರು ಹೊತ್ತಿಗೆಯಲ್ಲಿ ಮಾಡಿರುವ ಸಲಹೆ ಖಂಡಿತ ಒಪ್ಪುವಂತವಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಮಾಂಸಾಹಾರ ಸೇವಿಸದ ಗರ್ಭಿಣಿಯರು ಮೊಳಕೆಯೊಡೆದ ಕಾಳುಗಳು, ಬೇಳೆ, ಪನೀರ್‌, ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಬಳಸಬಹುದು ಎಂದು ಅವರು ಸಲಹೆ ನೀಡಿದ್ದಾರೆ.

‘ಕೆಲವೊಂದು ಸಂದರ್ಭ ಹೊರತುಪಡಿಸಿದರೆ ಸಾಮಾನ್ಯವಾಗಿ ಗರ್ಭಿಣಿಯರು ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ನಿಷಿದ್ಧವೇನಲ್ಲ’ ಎಂದು  ವೈದ್ಯರು ಸ್ಪಷ್ಟಪಡಿಸಿದ್ದಾರೆ.
*
ಆಯುಷ್‌ ಸಚಿವಾಲಯ ಸ್ಪಷ್ಟನೆ
ಯೋಗ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಯಲ್ಲಿ  ಸಾಮಾನ್ಯವಾಗಿ ಮಾಂಸಾಹಾರ ಸೇವನೆ ನಿಷಿದ್ಧ. ಹೀಗಾಗಿಯೇ ಗರ್ಭಿಯರು ಮಾಂಸಾಹಾರ ಸೇವಿಸದಂತೆ ಸಲಹೆ ಮಾಡಲಾಗಿದೆ ಎಂದು ಆಯುಷ್ ಸಚಿವಾಲಯ ಸ್ಪಷ್ಟಪಡಿಸಿದೆ.

ಆರೋಗ್ಯವಂತ ಮಗು ಪಡೆಯಲು ಗರ್ಭಿಣಿಯರಿಗೆ ಸಲಹೆ ನೀಡಲು ಸಚಿವಾಲಯ ಹೊರತಂದ ಕಿರುಹೊತ್ತಿಗೆ ವಿವಾದಕ್ಕೆ ಕಾರಣವಾಗುತ್ತಲೇ ಈ ಸ್ಪಷ್ಟನೆ ನೀಡಿದೆ.

ಕೇವಲ ಮಾಂಸಾಹಾರ ಮಾತ್ರವಲ್ಲ ಚಹಾ, ಕಾಫಿ, ಮೈದಾ ಹಿಟ್ಟಿನ ಉತ್ಪನ್ನ, ಕರಿದ ಎಣ್ಣೆ ಪದಾರ್ಥಗಳನ್ನು ಸೇವಿಸದಂತೆಯೂ ಸಲಹೆ ಮಾಡಲಾಗಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT