ಈರೋಡ್, ತಮಿಳುನಾಡು (ಪಿಟಿಐ): ಪೆರುಂದುರೈ ಬಳಿ ಮಂಗಳವಾರ ಬಟ್ಟೆ ಗಿರಣಿ ಬಣ್ಣ ಹಾಕುವ ಘಟಕದಲ್ಲಿ ಉಸಿರುಗಟ್ಟಿಸುವ ವಿಷಾನಿಲ ತುಂಬಿಕೊಂಡಿದ್ದ ಟ್ಯಾಂಕ್ ಒಳಗೆ ಬಿದ್ದಿದ್ದ ಏಳು ಮಂದಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿ ಘಟಕದ ವ್ಯವಸ್ಥಾಪಕರು ಸೇರಿದಂತೆ ಮೂವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಮಾಲಿನ್ಯ ನಿಯಂತ್ರಣ ಉಸ್ತುವಾರಿ ಹಾಗೂ ಕಾರ್ಮಿಕ ಕಲ್ಯಾಣ ಅಧಿಕಾರಿಯನ್ನೂ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐವರ ಶವವನ್ನು ಕುಟುಂಬ ಸದಸ್ಯರ ವಶಕ್ಕೆ ನೀಡಲಾಗಿದೆ. ಉಳಿದ ಇಬ್ಬರು ನೇಪಾಳದವರಾದ ಕಾರಣ ಇಲ್ಲೇ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಕಾರ್ಖಾನೆಗೆ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ, ಬಣ್ಣ ಹಾಕುವ ಘಟಕದ ಬಾಗಿಲನ್ನು ಮುಚ್ಚಿಸಲಾಗುವುದೆಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಹಿನ್ನೆಲೆ: ಇಬ್ಬರು ಕೆಲಸಗಾರರು ಮಂಗಳವಾರ ಅಕಸ್ಮಾತಾಗಿ ವಿಷಾನಿಲ ಟ್ಯಾಂಕ್ ಒಳಗೆ ಬಿದ್ದಿದ್ದಾರೆ. ಅಲ್ಲೇ ಇದ್ದ ಐವರು ಅವರನ್ನು ಬಚಾವ್ ಮಾಡಲು ಟ್ಯಾಂಕ್‌ಗೆ ಹಾರಿದ್ದಾರೆ. ಘಟಕದಲ್ಲಿದ್ದ ಉಳಿದ ಕೆಲಸಗಾರರು ಮೋಟಾರು ದುರಸ್ತಿ ಕೆಲಸದಲ್ಲಿ ಮಗ್ನರಾಗಿದ್ದ ಕಾರಣ ಏಳೂ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.