ADVERTISEMENT

ಗುಜರಾತ್: ಪ್ರಚಾರ ಸಮರ ತಾರಕಕ್ಕೆ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2012, 8:58 IST
Last Updated 10 ಡಿಸೆಂಬರ್ 2012, 8:58 IST

ಅಹಮದಾಬಾದ್ (ಪಿಟಿಐ): ಗುಜರಾತ್ ವಿಧಾನಸಭೆಗೆ ಡಿಸೆಂಬರ್ 12ರಂದು ನಡೆಯಲಿರುವ ಮೊದಲ ಹಂತದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಡಿಸೆಂಬರ್ 11ರಂದು ತೆರೆ ಬೀಳಲಿರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳಿಗೆ ಒಂದೇ ದಿನ ಬಾಕಿ ಉಳಿದಿದೆ. ಹೀಗಾಗಿ ಪ್ರಚಾರ ಸಮರ ಸೋಮವಾರ ತಾರಕಕ್ಕೆ ಏರಿದೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಖೇಡಾ ಜಿಲ್ಲೆಯ ಡಕೋರ್ ಸಮೀಪದ ಪಠಾಣ್ ಜಿಲ್ಲೆಯ ಸಿದ್ಧಾಪುರ ಪಟ್ಟಣದಲ್ಲಿ ಎರಡು ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾತನಾಡಲಿದ್ದಾರೆ.

ಮುಖ್ಯಮಂತ್ರಿ ನರೇಂದ್ರ ಮೋದಿ ಅವರು 3-ಡಿ ಹೊಲೋಗ್ರಾಫಿಕ್ ಪ್ರೊಜೆಕ್ಷನ್ ತಂತ್ರಜ್ಞಾನವನ್ನೂ ಬಳಸಿಕೊಂಡು ಏಕಕಾಲಕ್ಕೆ 53 ಪ್ರಚಾರ ಸಭೆಗಳಲ್ಲಿ ಭಾಷಣ ಮಾಡಲಿದ್ದಾರೆ.

ಇದರ ಹೊರತಾಗಿ ಆರು ಬಹಿರಂಗ ಪ್ರಚಾರ ಸಭೆಗಳಲ್ಲೂ ಅವರು ಜನ ಸಮೂಹವನ್ನು ಉದ್ದೇಶಿಸಿ ಮಾತನಾಡುವರು.

ಪ್ರಧಾನಿ ಮನಮೋಹನ್ ಸಿಂಗ್ ಅವರು ಭಾನುವಾರ ಗುಜರಾತಿನಲ್ಲಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿದ್ದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಮಂಗಳವಾರ ಸಾನಂದ್, ಜಾಮ್ನಗರ್ ಮತ್ತು ಅಮ್ರೇಲಿ ಈ ಮೂರು ಕಡೆ ಪ್ರಚಾರ ಸಭೆಗಳನ್ನು ನಡೆಸುವರು.

ಮೊದಲ ಹಂತದ ಚುನಾವಣೆಗಾಗಿ ಬಹಿರಂಗ ಪ್ರಚಾರಕ್ಕೆ ಮಂಗಳವಾರ ಸಂಜೆ 5 ಗಂಟೆಗೆ ತೆರೆ ಬೀಳಲಿದೆ.
ಎರಡನೇ ಹಂತದ ಚುನಾವಣೆ ಡಿಸೆಂಬರ್ 17ರಂದು ನಡೆಯಲಿದ್ದು ಡಿಸೆಂಬರ್ 15ರ ಸಂಜೆ ಎರಡನೇ ಹಂತದ ಚುನಾವಣೆಯ ಪ್ರಚಾರ ಸಮರಕ್ಕೆ ತೆರೆ ಬೀಳುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.